ಮೂರು ದಿನಗಳ (ಆಗಸ್ಟ್ ೨೭,೨೮,೨೯) ಕಾಲ ತುಮಕೂರು ಬಳಿಯ ರಮಣೀಯವಾದ ಓದೇಕರ್ ಎಸ್ಟೇಟಿನಲ್ಲಿ ನಡೆದ ಸಿನೆಮಾ ಓದುವುದು ಹೇಗೆ ಎನ್ನುವ ಕಾರ್ಯಾಗಾರದ ಕುರಿತ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳುವ ಮುನ್ನ ಸಿನೆಮಾ, ಸಿನೆಮಾ ವಿಮರ್ಶೆಗಳ ಕುರಿತು ನನಗೆ ಹೇಗೆ ಆಸಕ್ತಿ ಬೆಳೆಯಿತು ಎಂಬುದನ್ನು ನೆನಪಿಸಿಕೊಳ್ಳುವುದು ಸೂಕ್ತವೆಂದು ಭಾವಿಸುತ್ತೇನೆ.
ಸಾಹಿತ್ಯ, ಸಿನೆಮಾ, ಕ್ರೀಡೆ, ಕಲೆ, ವಿಜ್ಞಾನ, ಶಿಕ್ಷಣ, ತಂತ್ರಜ್ಞಾನ ಹೀಗೆ ಯಾವುದೇ ಕ್ಷೇತ್ರದಲ್ಲಿ ಎರಡು ಬಗೆಯ ಪರಿಣಿತರು ಇರುತ್ತಾರೆ. ಆ ಕ್ಷೇತ್ರದಲ್ಲಿ ಇಷ್ಟವಿದ್ದೋ ಇಲ್ಲದೆಯೋ ತೊಡಗಿಸಿಕೊಂಡು, ಹಲವು ವರ್ಷಗಳ ಅನುಭವವನ್ನು ಗಳಿಸಿಕೊಂಡು ಆ ಕ್ಷೇತ್ರದ ಪ್ರತಿನಿಧಿಗಳಾಗಿರುವಂಥವರು ಒಂದು ಗುಂಪಿನವರು. ಇವರಿಗೆ ಆಯಾ ಕ್ಷೇತ್ರದಲ್ಲಿ ಉತ್ತಮ ಪರಿಣಿತಿ ಇರುತ್ತದೆಯಾದರೂ ತಮಗೆ ತಿಳಿದೋ ತಿಳಿಯದೆಯೋ ಆ ಕ್ಷೇತ್ರದ ಸಿದ್ಧ ಮಾದರಿಗಳಿಗೆ, ಮಿತಿಗಳಿಗೆ ತಮ್ಮನ್ನು ಒಪ್ಪಿಸಿಕೊಂಡವರಾಗಿರುತ್ತಾರೆ. ಇನ್ನೊಂದು ಗುಂಪಿನ ಪರಿಣಿತರು ಯಾವುದೇ ಅಧಿಕೃತ ಗುರುತಿಸುವಿಕೆಯನ್ನು ಹೊಂದಿರುವುದಿಲ್ಲವಾದರೂ ಆ ಕ್ಷೇತ್ರದ ಬಗೆಗಿನ ಅವರ ವಯಕ್ತಿಕ ಆಸಕ್ತಿ, ಪರಿಶ್ರಮದಿಂದ ಅವರು ಸಿದ್ಧಿಸಿಕೊಂಡ ಅಧಿಕಾರಯುತ ತಿಳುವಳಿಕೆಯಿಂದಾಗಿ ಅವರಿಗೆ ಮನ್ನಣೆ ದೊರೆಯುತ್ತದೆ. ಈ ಎರಡನೆಯ ಗುಂಪಿನವರು ತಮ್ಮ ಶ್ರದ್ಧೆ, ತಮ್ಮ ಕೃಷಿಯಿಂದ ಆ ಕ್ಷೇತ್ರವನ್ನು ಬೆಳೆಸುವುದರ ಜೊತೆಗೆ ತಮ್ಮಲ್ಲಿ ತುಡಿಯುವ ಪ್ಯಾಶನ್ ನಿಂದಾಗಿ ಹಲವು ಮಂದಿಗೆ ಪ್ರತ್ಯಕ್ಷ ಇಲ್ಲವೇ ಪರೋಕ್ಷವಾಗಿ ದೀಕ್ಷೆ ಕೊಡುವಂಥವರಾಗಿರುತ್ತಾರೆ.
ಸ್ವತಃ ವಿಜ್ಞಾನದ ವಿದ್ಯಾರ್ಥಿಯಾಗಿದ್ದುಕೊಂಡು ವಿಜ್ಞಾನದ ಬಗೆಗಿನ ತಮ್ಮ ಪ್ಯಾಶನ್ ನಿಂದ ಹಲವರನ್ನು ವಿಜ್ಞಾನದೆಡೆಗೆ ಸೆಳೆದ ಕೆಲವು ವ್ಯಕ್ತಿಗಳನ್ನು ನಾನು ಹೆಸರಿಸಲು ಇಚ್ಚಿಸುವೆ. ಕಾರ್ಲ್ ಸೇಗನ್, ರಿಚರ್ಡ್ ಫೀಮನ್, ನಾಗೇಶ್ ಹೆಗಡೆ, ಪೂರ್ಣ ಚಂದ್ರ ತೇಜಸ್ವಿ. ಇವರಲ್ಲಿ ಮೊದಲ ಈರ್ವರು ವಿಜ್ಞಾನಿಗಳಾಗಿಯೇ ದುಡಿದವರು. ಆದರೆ ಈ ನಾಲ್ಕು ಮಂದಿಯಲ್ಲಿ ಸಮಾನವಾಗಿ ಕಾಣುವ ಅಂಶ: ವಿಜ್ಞಾನದ ಜೀವಸತ್ವವನ್ನು ಹೀರಿಕೊಂಡು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡದ್ದು. ವಿಜ್ಞಾನ ಅವರಿಗೆ ಕೇವಲ ಪೇಟೆಂಟ್ ಸಂಪಾದನೆಯ, ಮಾಹಿತಿ ಸಂಗ್ರಹದ ಕ್ಷೇತ್ರವಾಗಿರಲಿಲ್ಲ. ಅದು ಅವರ ಜೀವನ ದೃಷ್ಟಿ, ಅವರ ವ್ಯಕ್ತಿತ್ವನ್ನು ರೂಪಿಸುವ ಶಕ್ತಿಯಾಗಿತ್ತು. ಇಂತಹ ವ್ಯಕ್ತಿಗಳು ವಿಜ್ಞಾನದ ಬಗ್ಗೆ ಮಾತನಾಡಿದರೆ ಸಾಕು ಯುನಿವರ್ಸಿಟಿ ಪ್ರೊಫೆಸರ್ ಗಳು ಉಂಟುಮಾಡಲು ಸಾಧ್ಯವಾಗದ ಉತ್ಸಾಹ, ಆಸಕ್ತಿ ಕೇಳುಗರಲ್ಲಿ ಉದಿಸುತ್ತದೆ.
ಸಿನೆಮಾ ಕುರಿತು ನನ್ನಲ್ಲಿ ಇಂಥದ್ದೇ ಬೆರಗು, ಆಸಕ್ತಿಯನ್ನು ಮೂಡಿಸಿದ್ದು ಶೇಖರ್ ಪೂರ್ಣ ಸರ್. ಸಂವಾದ ಡಾಟ್ ಕಾಮ್ ಆಯೋಜಿಸಿದ್ದ ಒಂದೆರಡು ಸಂವಾದಗಳಲ್ಲಿ ಸುಮ್ಮನೆ ಕುತೂಹಲದಿಂದ ಭಾಗವಹಿಸಿದವನಿಗೆ ಮನರಂಜನೆಯ ಉದ್ದೇಶದಿಂದ ನಿರ್ಮಿತವಾದ, ಜನಪ್ರಿಯ ಮಾನದಂಡದಲ್ಲಿ ‘ಸೀರಿಯಸ್’ ಅಲ್ಲದ ಸಿನೆಮಾಗಳನ್ನು ಕುರಿತು ಅಕಾಡೆಮಿಕ್ ಶಿಸ್ತಿನಲ್ಲಿ ಚರ್ಚೆ ನಡೆಸಬೇಕು ಎನ್ನುವ ಅವರ ಅಭೀಪ್ಸೆಯೇ ವಿಚಿತ್ರವಾಗಿ ಕಾಣುತ್ತಿತ್ತು. ಸಿನೆಮಾ, ನಾಟಕಗಳ ಶಾಸ್ತ್ರೀಯ ವಿಶ್ಲೇಷಣೆಗೆ ಸಂವಾದ ಡಾಟ್ ಕಾಮ್ ಶುರು ಮಾಡಿದ ಶೇಖರ್ ಪೂರ್ಣರ ತಂಡದ ನೈಜ ಉದ್ದೇಶ ಹಾಗೂ ಅವರ ಕೆಲಸದ ಸ್ವರೂಪದ ಬಗ್ಗೆ ಅವರು ಆಯ್ದುಕೊಂಡ ಸಿನೆಮಾದ ನಿರ್ದೇಶಕರುಗಳಿಗೇ ಸ್ಪಷ್ಟತೆ ಇಲ್ಲದಿದ್ದುದರಿಂದ ಸಂವಾದಗಳಲ್ಲಿ ಶೇಖರ್ ಪೂರ್ಣರೂ ಹೆಚ್ಚಾಗಿ ಮಾತನಾಡಬೇಕಾಗಿ ಬರುತ್ತಿದುದನ್ನು ಗುರುತಿಸಿದ್ದೆ. ಮೇಲಾಗಿ ಕಲಾಕೃತಿಯೊಂದರಲ್ಲಿ ಇಲ್ಲದ್ದನ್ನು ಆರೋಪಿಸಿ ಕೇವಲ ಬೌದ್ಧಿಕ ಬಡಿವಾರದಿಂದ ಶ್ರೇಷ್ಟ ಕೃತಿಯನ್ನು ಕನಿಷ್ಠವೆಂದೂ, ಕಳಪೆ ಕೃತಿಯನ್ನು ಉತ್ಕೃಷ್ಟವೆಂದೂ ನಿರೂಪಿಸುವ ವಿಮರ್ಶಕರ ವಿಮರ್ಶಾ ಪದ್ಧತಿಯ ಕುರಿತು ಭಯ ನನ್ನಲ್ಲಿತ್ತು.
ಹೀಗೆ ಕುತೂಹಲ, ಸಂಶಯ, ಭಯಗಳಿಂದ ಶೇಖರ್ ಪೂರ್ಣರ ಮಾತುಗಳಿಗೆ ನನ್ನನ್ನು ನಾನು ತೆರೆದುಕೊಂಡಂತೆ ಅವರ ಪ್ರಯತ್ನದ ಕುರಿತು ಗೌರವ ಬೆಳೆಯುತ್ತಾ ಹೋಯಿತು. ಒಂದು ಶನಿವಾರದ ಸಂಜೆ ಅವರ ಅಪಾರ್ಟ್ ಮೆಂಟ್ ಕೋಣೆಯಲ್ಲಿ ಕೂತು ಕೆದಕಿ ಕೆದಕಿ ಪ್ರಶ್ನಿಸುತ್ತಾ ಮನರಂಜನೆಯ ಸರಕು ಎಂದು ಉಡಾಫೆಯಿಂದ ಕಾಣುತ್ತಿದ್ದ ಸಿನೆಮಾ ಬಗ್ಗೆ ನನಗೆ ತಿಳಿಯದೇನೇ ಆಸಕ್ತಿ ಬೆಳೆಯುತ್ತಾ ಹೋಯಿತು.
ಮುಂಗಾರು ಮಳೆ
ಮುಂಗಾರು ಮಳೆ ಕನ್ನಡ ಚಿತ್ರರಂಗದಲ್ಲಿ ದೊಡ್ಡದೊಂದು ಬಿರುಗಾಳಿಯನ್ನೇ ಎಬ್ಬಿಸಿದ ಸಿನೆಮ. ಗುಣಮಟ್ಟದಲ್ಲೂ ಜನಪ್ರಿಯತೆಯಲ್ಲೂ ಹೊಸದೊಂದು ಎತ್ತರವನ್ನು ಸ್ಥಾಪಿಸಿದ ಸಿನೆಮ. ಒಂದು ಕವನದ ಕುರಿತು, ಒಂದು ಕಥೆಯ ಕುರಿತು ತೀರಾ ವಿಚಕ್ಷಣತೆಯಿಂದ ವಿಮರ್ಶೆಯನ್ನು ಬರೆಯುವ, ಸಾಹಿತ್ಯದಲ್ಲಿ ಅತಿ ಶಕ್ತಿಶಾಲಿಯಾದ ಒರೆಗಲ್ಲುಗಳನ್ನು ಆವಿಷ್ಕರಿಸಿ ಕೃತಿಗಳನ್ನು ತೀಡಿ ನೋಡುವ ವಿಮರ್ಶಕರು ತುಂಬಿರುವ ನಮ್ಮ ನೆಲದಲ್ಲಿ ಆ ಮಟ್ಟಿಗಿನ ಸಂಚಲನವನ್ನು ಉಂಟು ಮಾಡಿದ ಮುಂಗಾರು ಮಳೆ ಕುರಿತು ಮೇಲ್ಪದರದ ಗಮನಿಸುವಿಕೆಗಳನ್ನು ದಾಟಿದ, ಆಳಕ್ಕೆ ಇಳಿಯುವ ವಿಮರ್ಶೆಗಳೇ ಬರಲಿಲ್ಲ ಎನ್ನುವುದನ್ನು ಗುರುತಿಸುವಂತೆ ಮಾಡಿದರು.
ಇಂದು ನಮ್ಮ ನಡುವೆ ಇಲ್ಲದ, ನಮ್ಮ ಚಿತ್ರಮಂದಿರಗಳಲ್ಲೆಲ್ಲೂ ಬಿಡುಗಡೆಯಾಗದ ಸತ್ಯಜಿತ್ ರೇ, ಅಕಿರ ಕುರಸಾವ, ಬರ್ಗ್ ಮನ್ ಮೊದಲಾದವರ ಚಿತ್ರಗಳು ಇಂದಿಗೂ ಸಿನೆಮಾ ಆಸಕ್ತರ ಗಮನ ಸೆಳೆಯುತ್ತಿರುವುದು, ಅವುಗಳು ಇಂದಿಗೂ ಪ್ರಸ್ತುತವಾಗಿರುವುದಕ್ಕೆ ಅವುಗಳ ಕುರಿತು ರಚನೆಯಾಗಿರುವ ಟೆಕ್ಸ್ಟ್ (ಪಠ್ಯ) ಕಾರಣ. ಇಂತಹ ಪ್ರಯತ್ನ ಕನ್ನಡದಲ್ಲಿ ಎಲ್ಲೂ ಕಾಣ ಬರುವುದಿಲ್ಲ. ಮುಂಗಾರು ಮಳೆಯಂತಹ ಅತ್ಯಂತ ಪ್ರಭಾವಶಾಲಿ ಸಿನೆಮಾವನ್ನು ಕನ್ನಡದ ಪ್ರಜ್ಞಾವಂತ ಪ್ರೇಕ್ಷಕ ಅರ್ಥ ಮಾಡಿಕೊಂಡ ರೀತಿ ಎಂಥದ್ದು? ಅಂತಹ ಒಂದು ಫಿನಾಮೆನಾನ್‌ಗೆ ಕನ್ನಡಿಗರು ಒಂದು ಸಮಾಜವಾಗಿ ಬೌದ್ಧಿಕ ನೆಲೆಯಲ್ಲಿ ಪ್ರತಿಕ್ರಿಯಿಸಿದ್ದು ಹೇಗೆ? ಆ ಸಿನೆಮಾ ಆ ಮಟ್ಟಿಗಿನ ಯಶಸ್ಸನ್ನು ಕಾಣುವುದಕ್ಕೆ, ಆ ಸಿನೆಮಾದ ಬಿಡಿ ಬಿಡಿಯಾದ ತಾಂತ್ರಿಕ ಕೌಶಲ್ಯವನ್ನು ನಕಲು ಮಾಡಿದರೂ ಉಳಿದ ಸಿನೆಮಾಗಳು ಆ ಮಟ್ಟಿಗಿನ ಸಂಚಲನ ಉಂಟು ಮಾಡುವುದಕ್ಕೆ ಏಕೆ ಸೋತವು? ಇಷ್ಟಕ್ಕೂ ಮುಂಗಾರು ಮಳೆಯಂತಹ ಸಿನೆಮಾ ಏನು ಹೇಳುತ್ತದೆ? ಅದು ಆ ಮಟ್ಟಿಗೆ ಜನಪ್ರಿಯವಾಗುವುದಕ್ಕೆ ಸಮಾಜದ ಯಾವ ತಂತಿಯನ್ನು ಮೀಟಿದ್ದು ಕಾರಣ? ಮೊದಲಾದ ಪ್ರಶ್ನೆಗಳಿಗೆ ನಾವು ಉತ್ತರವನ್ನು ಕಂಡುಕೊಳ್ಳಬೇಕೆಂದು ಪ್ರಯತ್ನಿಸುವ ಜವಾಬ್ದಾರಿತನವನ್ನೂ ತೋರಲಿಲ್ಲ ಎಂದು ಅವರು ಹೇಳಿದಾಗ ನನ್ನ ನಾನು ಪ್ರಶ್ನಿಸಿಕೊಳ್ಳಲಾರಂಭಿಸಿದೆ.
ಸಿನೆಮಾ ಓದುವುದೆಂದರೆ?
ಮುಂಗಾರು ಮಳೆಯನ್ನೇ ರೆಫರೆನ್ಸ್ ಪಾಯಿಂಟ್ ಆಗಿ ಇಟ್ಟುಕೊಂಡು ಆಲೋಚಿಸಿದರೆ ಸಿನೆಮಾ ಓದುವ ಕುರಿತ ಸ್ಪಷ್ಟತೆ ಸಿಕ್ಕಬಹುದು. ಮುಂದುವರಿಯುವ ಮೊದಲು ಕೆಲವು ಮೇಲ್ನೋಟದ ಅನಿಸಿಕೆಗಳಿಗೆ, ಸಿನಿಕತನದ ಪ್ರತಿಕ್ರಿಯೆಗಳಿಗೆ ಸಮಾಧಾನ ಕಂಡುಕೊಳ್ಳಲು ಇಚ್ಚಿಸುತ್ತೇನೆ.
ಒಂದು ಸಿನೆಮ ಕತೆ, ಚಿತ್ರ ಕಥೆ, ಸಂಭಾಷಣೆ, ನಿರ್ದೇಶನ, ಸಂಗೀತ ಸಂಯೋಜನೆ,ಛಾಯಾಗ್ರಹಣ, ನಿರ್ಮಾಣ ಹೀಗೆ ಎಲ್ಲಾ ಹಂತಗಳಲ್ಲಿ ಮನರಂಜನೆ ಹಾಗೂ ಹಣದ ಗಳಿಕೆಯನ್ನೇ ಗುರಿಯಾಗಿಟ್ಟುಕೊಂಡು ನಿರ್ಮಾಣವಾಗಿರುವಾಗ ಅದನ್ನು ಕುರಿತು ಬೌದ್ಧಿಕ ಚರ್ಚೆ ಮಾಡುವುದು, ಆ ಸಿನೆಮಾ ಏನನ್ನು ಹೇಳುತ್ತದೆ ಎಂದು ಪ್ರಶ್ನಿಸುವುದರ ಅವಶ್ಯಕತೆಯೇನು? ಇದರಿಂದ ಯಾವ ಪುರುಷಾರ್ಥ ಸಿದ್ಧಿಸುತ್ತದೆ? ಮುಂಗಾರು ಮಳೆ, ಮೊಗ್ಗಿನ ಮನಸ್ಸು, ಕೃಷ್ಣನ್ ಲವ್ ಸ್ಟೋರಿ, ಮನಸಾರೆ ಇಂತಹ ಸಿನೆಮಾಗಳು ಮನರಂಜನೆಗಾಗಿ ತಯಾರಾಗಿರುವಂಥವು. ಅವು ಏನನ್ನೂ ಹೇಳುವುದಿಲ್ಲ. ಹಾಗೆ ಸಿನೆಮಾವನ್ನು ಅರ್ಥ ಮಾಡಿಕೊಳ್ಳುವ, ಗಂಭೀರವಾಗಿ ತೊಡಗಿಕೊಳ್ಳುವ ಉದ್ದೇಶವೇ ಇದ್ದರೆ ಪಿ.ಶೇಷಾದ್ರಿ, ಗಿರೀಶ್ ಕಾಸರವಳ್ಳಿ ಮೊದಲಾದವರ ಸೀರಿಯಸ್ ಚಿತ್ರಗಳನ್ನೇ ಏಕೆ ಆಯ್ದುಕೊಳ್ಳಬಾರದು? ಅಂತಹ ಸಿನೆಮಾಗಳು ನಾವು ಕಾಣಬಯಸುವ ‘ಸಿನೆಮಾ ಸಾಹಿತ್ಯ’ ತುಂಬಿಕೊಂಡವಾಗಿರುತ್ತವೆ ಎಂದು ಒಂದು ವಾದವಿದೆ. ‘ಸಿನೆಮಾ ಓದುವುದು ಹೇಗ’ ಶಿಬಿರದಲ್ಲಿಯೂ ಈ ಪ್ರಶ್ನೆ ಅನೇಕರ ಬಾಯಿಂದ ಹೊರಟಿತ್ತು.
ಸಿನೆಮಾಗಳಲ್ಲಿ ಆರ್ಟ್ ಸಿನೆಮಾ ಕಮರ್ಶಿಯಲ್ ಸಿನೆಮಾ ಇವೆರಡೂ ಅಲ್ಲದ ಅಥವಾ ಇವೆರಡೂ ಆಗಲು ಹೊರಟ ಬ್ರಿಜ್ ಸಿನೆಮಾ ಮೊದಲಾದ ವರ್ಗೀಕರಣಗಳು ಆಯಾ ಸ್ಥಳದ ಹಾಗೂ ಕಾಲದ ಪರಿಸ್ಥಿತಿಗಳಿಂದ ನಿರ್ಮಿತವಾದವುಗಳಷ್ಟೇ. ಆರ್ಟ್ ಸಿನೆಮಾ ಎಂಬ ಹಣೆ ಪಟ್ಟಿ ಹೊತ್ತು ತೀರಾ ಗಂಭೀರ ವಸ್ತುವನ್ನು ತೊಡಗಿಸಿಕೊಂಡು ಪ್ರಶಸ್ತಿ ಸಂಪಾದಿಸಿಕೊಂಡ ಸಿನೆಮಾ ವಸ್ತುನಿಷ್ಠ ನೆಲೆಯಲ್ಲಿ (objective perspective) ಅತಿ ಕೆಟ್ಟ ಸಿನೆಮಾ ಆಗಿರಬಹುದು. ಎಷ್ಟೇ ಸೃಜನಶೀಲವಾದ ನಿರ್ದೇಶಕನ ಪ್ರಯತ್ನವು ಸಿನೆಮಾದಲ್ಲಿ ತೊಡಗಿದ್ದರೂ ಸಿನೆಮಾ ಒಂದು ಸೃಜನಶೀಲ ಕೃತಿಯಾಗಿ ರೂಪುಗೊಳ್ಳುವುದರಲ್ಲಿ ಸೋತಿರಬಹುದು. ಮನರಂಜನೆಯ ಮಾನದಂಡದಿಂದಲೇ ನಿರ್ಮಿತವಾದ ಸಿನೆಮ ಯಾವುದೋ ಮಾಂತ್ರಿಕ ಪ್ರಭಾವಳಿಯನ್ನು ಪಡೆದು ಸೃಜನಶೀಲ ಕೃತಿಯಾಗಿ ಹೊಮ್ಮಿ ಬಿಟ್ಟಿರಬಹುದು. ಸ್ವತಃ ನಿರ್ದೇಶಕ, ನಿರ್ಮಾಪಕರ, ನಟರ ಗ್ರಹಿಕೆಯನ್ನೂ ಮೀರಿದ ಸ್ತರಕ್ಕೆ ಚಾಚಿಕೊಂಡಿರಬಹುದು. ಇದನ್ನೆಲ್ಲಾ ನಿರ್ಧರಿಸುವುದಕ್ಕೆ ವೈಜ್ಞಾನಿಕವಾದ, ವಸ್ತುನಿಷ್ಠವಾದ, ವಯಕ್ತಿಕ ಇಷ್ಟ- ವರ್ಜ್ಯಗಳನ್ನು ಮೀರಿದ ದೃಷ್ಟಿ ಅಗತ್ಯ.
ಶೇಖರ್ ಪೂರ್ಣ ಸದಾ ಉಲ್ಲೇಖಿಸುವ ಹೇಳಿಕೆಯೊಂದನ್ನು ನೆನಪಿಸಿಕೊಳ್ಳಬಯಸುವೆ: ‘Don’t trust the author’. ಓದುಗನಿಗೆ ಅಥವಾ ಪ್ರೇಕ್ಷಕನಿಗೆ ಮುಖ್ಯವಾಗಬೇಕಿರುವುದು ಕೃತಿಯೊಂದೇ. ಅದನ್ನು ಬುದ್ಧಿಜೀವಿಯಾದ ಕಲಾ ಸಿನೆಮಾ ನಿರ್ದೇಶಕನು ನಿರ್ಮಿಸಿದ್ದೋ ಅಥವಾ ಕಮರ್ಶಿಯಲ್ ನಿರ್ದೇಶಕನು ನಿರ್ಮಿಸಿದ್ದೋ ಎನ್ನುವುದು ಮುಖ್ಯವಾದರೆ ನಾವು ಕೃತಿಗೆ ನಿಷ್ಠರಾಗಿ ಉಳಿಯುವುದಿಲ್ಲ.
ವಿಮರ್ಶೆಯೋ ವರದಿಯೋ?
ವಿಮರ್ಶೆಯಲ್ಲಿ ಇಂತಹ ದೃಷ್ಟಿಕೋನದ ಅಗತ್ಯವನ್ನು ಮನಗಂಡು ಅದರ ಆವಿಷ್ಕಾರ, ಪರಿಷ್ಕರಣೆಯಲ್ಲಿ ತೊಡಗಿಕೊಂಡ ವಿಮರ್ಶಕರು ಕನ್ನಡ ಸಾಹಿತ್ಯದಲ್ಲಿ ಅನೇಕ ಮಂದಿಯಿದ್ದಾರೆ. ವಿಮರ್ಶೆಯ ಸ್ವರೂಪದ ಕುರಿತೇ ಸಂವಾದಗಳು ಸಾಹಿತ್ಯದ ಜಗಲಿಯಲ್ಲಿ ನಡೆಯುತ್ತಿವೆ. ಹತ್ತಾರು ಕಾದಂಬರಿಗಳನ್ನು ಓದಿಕೊಂಡ ಸಾಮಾನ್ಯ ಓದುಗ ಸಹ ಕೃತಿಯೊಂದನ್ನು ಕೃತಿಕಾರನ, ವಸ್ತುವಿನ, ನಿರೂಪಣೆಯ ತಂತ್ರದ ಹಂಗಿಲ್ಲದೆ ಕಾಣಬೇಕು ಎಂಬ ಎಚ್ಚರವನ್ನು ಹೊಂದಿರುತ್ತಾನೆ. ಆದರೆ ಸಿನೆಮಾ ವಿಮರ್ಶೆ ಹೇಗಿದೆ?
ಆರ್ಟ್ ಸಿನೆಮ ಎಂದು ಪ್ರತ್ಯೇಕ ವರ್ಗೀಕರಣದಡಿಯಲ್ಲಿ ತಯಾರಾಗುವ ಸಿನೆಮಾಗಳು ಕನ್ನಡದ ಮಟ್ಟಿಗೆ ತೀರಾ ಸಾಹಿತ್ಯಿಕವಾದವುಗಳು. ಕಾದಂಬರಿಯನ್ನೋ, ಕಥೆಯನ್ನೋ ಆಧರಿಸಿ ರೂಪಿಸಲ್ಪಡುವ ಸಿನೆಮಾಗಳು. ಇಂತಹ ಸಿನೆಮಾಗಳಲ್ಲಿ ಸಾಹಿತ್ಯಿಕವಾಗಿ ಮುಖ್ಯವಾಗುವ ಸಮಸ್ಯಾತ್ಮಕ ನಿರೂಪಣೆ, ವಿವಿಧ ಪಾತ್ರಗಳನ್ನು ಸೃಷ್ಟಿಸಿ ಅವುಗಳು ಮುಖಾಮುಖಿಯಾಗುವ ಸಾಹಿತ್ಯದ ಶೈಲಿಯೇ ಮುಖ್ಯವಾಗುತ್ತದೆ. ಇಂತಹ ಸಿನೆಮಾವನ್ನು ಕಥೆಯಾಗಿ ಬರೆದರೂ ಯಾವುದೇ ನಷ್ಟವಾಗದಂತೆ ದಾಟಿಸಬಹುದು. ಇಂತಹ ಸಿನೆಮಾಗಳ ಕುರಿತು ಅಕಾಡೆಮಿಕ್ ಚರ್ಚೆಗಳಾಗುತ್ತವೆಯಾದರೂ ಒಟ್ಟಾರೆಯಾಗಿ ಅದರಿಂದ ಸಿನೆಮಾ ವಿಮರ್ಶೆಗೆ, ಸಿನೆಮಾಗಳನ್ನು ಆಳವಾಗಿ ಗ್ರಹಿಸುವ ಹಸಿವು ಇರುವವರ ಸಾಮಾನ್ಯ ಪ್ರೇಕ್ಷಕರ ನೆರವಿಗೆ ಅವು ಒದಗುವುದಿಲ್ಲ.
ಜನಪ್ರಿಯ ಚಿತ್ರಗಳನ್ನು ಕುರಿತು ಪತ್ರಿಕೆಗಳಲ್ಲಿ ಪ್ರಕಟವಾಗುವ ವಿಮರ್ಶೆಗಳು ಹೆಣ್ಣು ಕುದುರೆ ಹಾಗೂ ಗಂಡು ಕತ್ತೆಯ ಸಂತಾನವಾದ mule ರೀತಿ ಇರುತ್ತವೆ. ಕ್ರಿಕೆಟ್ ವರದಿಗೂ, ಪ್ರಶಸ್ತಿ ಪ್ರದಾನ ಸಮಾರಂಭದ ವರದಿಗೂ, ಹೊಸ ರುಚಿಯ ಬರಹಕ್ಕೂ ಸಿನೆಮಾ ವಿಮರ್ಶೆಗೂ ವ್ಯತ್ಯಾಸವೇ ಇರುವುದಿಲ್ಲ. ನಾಯಕ ಸ್ವಲ್ಪ ಅಳುವುದನ್ನು ಕಲಿಯಬೇಕು, ನಟಿ ಬಟ್ಟೆ ಕಡಿಮೆ ಮಾಡಿದಷ್ಟೇ ತನ್ನ ನಟನೆಯಲ್ಲಿನ ಕೃತಕತೆಯನ್ನು ಕಡಿಮೆ ಮಾಡಬೇಕು, ಹಾಡುಗಳು ಸುಮಾರಾಗಿವೆ, ಛಾಯಾಗ್ರಾಹಕ ಕ್ಯಾಮರಾದೊಂದಿಗೆ ಪಳಗಬೇಕು, ನಿರ್ಮಾಪಕ ಇನ್ನಷ್ಟು ಗಂಟು ಬಿಚ್ಚಬೇಕು- ಹೀಗೆ ಮೊದಲಾದ ಕೆಲವು ತೀರಾ ವೈಯಕ್ತಿಕ ಇಷ್ಟಾ ನಿಷ್ಟವನ್ನು ಅವಲಂಬಿಸಿದ ಅಭಿಪ್ರಾಯಗಳನ್ನು ಪೋಣಿಸಿ, ಪಂಚಿಂಗ್ ಎನ್ನಿಸುವ, ಸರ್ಕಾಸ್ಟಿಕ್ ರಿಮಾರ್ಕುಗಳನ್ನು ಕಲೆ ಹಾಕಿ ವಿಮರ್ಶೆ ಬರೆದು ಕೈ ತೊಳೆದುಕೊಳ್ಳುತ್ತಾರೆ. ಇಲ್ಲವೇ ಆಫೀಸು ಗಾಸಿಪ್ಪು, ಅಕ್ಕ ಪಕ್ಕದ ಮನೆಯ ಸಂಸಾರದ ಕತೆಗಳಂತೆ ಸಿನೆಮಾ ಕತೆಯನ್ನು ಹೇಳಿಬಿಡುವುದು, ಆ ಕಥೆ ತಮ್ಮಲ್ಲಿ ಉಂಟು ಮಾಡಿದ ಭಾವನೆಗಳನ್ನು, ತಮ್ಮ ಬದುಕಿನಲ್ಲಿ ಮಾಡಿದ ಪ್ರಭಾವವನ್ನು ನೆನೆದು ಕಣ್ಣೀರಿಡುವುದು ಇವಿಷ್ಟೇ ವಿಮರ್ಶೆಯ ಹಾದಿಯನ್ನು ಮಂಜಿನ ಹಾಗೆ ಕವಿದು ಮಸುಕಾಗಿವೆ. ನನ್ನ ಹಲವಾರು ಸಿನೆಮಾ ವಿಮರ್ಶೆಗಳನ್ನು ಓದಿದರೂ ನನಗೆ ಕಾಣುವುದು ಇದೇ mule ಮಾದರಿಯ ಬರಹಗಳು.
ಸಿನೆಮಾ ಓದುವುದು ಹೇಗೆ ಶಿಬಿರದ ಮೊದಲ ದಿನ ಮೊಗ್ಗಿನ ಮನಸ್ಸು ಚಿತ್ರವನ್ನು ನೋಡಿ ಅದರ ನಿರ್ದೇಶಕರು ಹಾಗೂ ಇನ್ನಿತರ ಪ್ರತಿಷ್ಠಿತರ ಸಮ್ಮುಖದಲ್ಲಿ ನಡುರಾತ್ರಿ ಎರಡವರೆಗೆ ನಡೆಸಿದ ಚರ್ಚೆಯಲ್ಲಿ ಬಹುವಾಗಿ ಹೊಮ್ಮಿದ್ದು ಈ mule ಬಗೆಯ ವಿಮರ್ಶೆಗಳೇ. ಈ ಬಗೆಯದಲ್ಲದ ಇನ್ನೂ ಕೆಲವು ವಿಮರ್ಶೆಯ ಮಾದರಿಗಳು ಕಂಡು ಬಂದವು. ಸಿನಮಾ ಒಂದು ಸಮಾಜೋರಾಜಕೀಯ ಸಿದ್ಧವಸ್ತು (socio political product), ಇಲ್ಲವೇ ಸಿನೆಮಾ ಸಮಾಜವನ್ನು ತಿದ್ದುವ ಮಾಧ್ಯಮ, ಸಿನೆಮಾ ಕಲೆಗಾಗಿ ಕಲೆ (Art for the sake of art) ಎನ್ನುವ ಈಗಾಗಲೇ ಸ್ಥಿರವಾದ ಸಿದ್ಧಾಂತಗಳ ಬಣ್ಣದ ಗಾಜಿನೊಳಗಿಂದ ಸಿನೆಮಾವನ್ನು ಕಂಡು, ತಮ್ಮ ತೀರ್ಮಾನಗಳನ್ನು ಸಿನೆಮಾದ ಮೇಲೆ ಹೇರುವ ಮಾದರಿಯ ವಿಮರ್ಶೆಗಳು. ಇಂತಹ ವಿಮರ್ಶೆ ಓದಿಕೊಂಡ ಬುದ್ಧಿವಂತರು ಮಾಡಬಲ್ಲರು. ಸಿನೆಮಾವೊಂದನ್ನು ನೋಡದೆಯೂ ಸಹ ಇಂತಹ ವಿಮರ್ಶೆಗಳನ್ನು ಹೆಣೆಯಲು ಸಾಧ್ಯವಿದೆ. ಆದರೆ ಇಂತಹ ವಿಮರ್ಶೆಗಳ ಕಂದೀಲು ಹಿಡಿದು ಸಿನೆಮಾ ನೋಡಿದರೆ ನಮಗೆ ಸಿನೆಮಾ ಸ್ಪಷ್ಟವಾಗಿ ಈ ಕಂದೀಲಿನ ಬೆಳಕನ್ನು ಪ್ರತಿಭಟಿಸಿ ಹೊರಗಟ್ಟುವುದು ಅನುಭವಕ್ಕೆ ಬರುತ್ತದೆ.
ಹಾಗಿದ್ದರೆ ನಿಜವಾದ ವಿಮರ್ಶೆ ಯಾವುದು?
ಮೊಗ್ಗಿನ ಮನಸ್ಸು ಕುರಿತು ಮಧ್ಯರಾತ್ರಿ ಎರಡರವರೆಗೆ ನಡೆಸಿದ ಸಂವಾದದ ಮರುದಿನ ಬೆಳಿಗ್ಗೆ ಆ ಸಿನೆಮಾದ ನಿರ್ದೇಶಕ ಶಶಾಂಕ್ ರೊಂದಿಗೆ ನೇರವಾದ ಮಾತುಕತೆಯಿತ್ತು. ಟಿವಿ ಚಾನಲ್ ಗಳ ಕೆಮರಾ ಇಲ್ಲದ, ಆಪ್ತವಾದ ಅನೌಪಚಾರಿಕ ಮಾತುಕತೆಯಾದ್ದರಿಂದ ನಿರ್ದೇಶಕರು ಮನಬಿಚ್ಚಿ ಮಾತನಾಡಿದರು. ಮೊಗ್ಗಿನ ಮನಸ್ಸು ಸಿನೆಮಾವನ್ನು ಅವರು ಗ್ರಹಿಸಿದ ರೀತಿ, ಅವರ ಮನಸ್ಸಿನಲ್ಲಿ ಕತೆಯು ರೂಪು ಗೊಂಡ ಬಗೆ, ಅವರು ಸಿನೆಮಾದಲ್ಲಿ ಬಿಂಬಿಸಲು ಯತ್ನಿಸಿದ ಅಂಶಗಳು ಮೊದಲಾದವುಗಳನ್ನು ತಿಳಿಸಿದಾಗ ನಮಗೆ ಮೊಗ್ಗಿನ ಮನಸ್ಸು ಸಿನೆಮಾವನ್ನು ಶಶಾಂಕ್ ರಿಂದ ಬೇರ್ಪಡಿಸಿ ನೋಡಬೇಕು ಏಕೆ ಎನ್ನುವುದರ ಕುರಿತು ಸೂಚನೆಗಳು ದೊರೆತವು.
ಈ ಮನಸ್ಥಿತಿಯಲ್ಲಿ ಮುಂಗಾರು ಮಳೆ ಸಿನೆಮಾವನ್ನು ನೋಡಿದೆವು. ಸಿನೆಮಾ ನೋಡುತ್ತಿರುವಾಗ ನಡುವೆ ಫ್ರಾನ್ಸಿನವರಾದ, ಪ್ರಸ್ತುತ ಶಿವಮೊಗ್ಗದಲ್ಲಿ ನೆಲೆಸಿರುವ ಡೇವಿಡ್ ಬಾಂಡ್ ಮುಂಗಾರು ಮಳೆಯ ಕುರಿತ ತಮ್ಮ ರೀಡಿಂಗ್ ನೀಡಿದರು. ಮುಂಗಾರು ಮಳೆಯನ್ನು ಒಂದು ಆಕಸ್ಮಿಕವಾದ ಯಶಸ್ವಿ ಸಿನೆಮ ಎಂದು ಕರೆಯಲು ನಿರಾಕರಿಸಿ ಅವರು ದೇವದಾಸ್ ಸಿನೆಮಾದಿಂದ ಶುರುವಾದ ನೈತಿಕ ಹಾಗೂ ಅನೈತಿಕ ಪ್ರೇಮ ಸಂಬಂಧದ ಕಲಾತ್ಮಕ ಸಂವಾದದ ಮುಂದುವರಿಕೆ ಮುಂಗಾರು ಮಳೆ ಎಂದು ನಿರೂಪಿಸಿದರು. ಅವರ ಮಾತುಗಳು ಶಿಬಿರದಲ್ಲಿದ್ದ ಉಳಿದವರಿಗೆ ಹೇಗೆ ಕಂಡಿತೋ ಕಾಣೆ, ನನಗಂತೂ ಅದೂ ಆ ಸಿನೆಮಾವನ್ನು ನೋಡುವುದಕ್ಕೆ ಹೊಸ ದೃಷ್ಟಿಯನ್ನೇ ಕೊಟ್ಟು ಬಿಟ್ಟಿತು. ಅಲ್ಲಿಯವರೆಗೆ ಮುಚ್ಚಿದ್ದ ಬಾಗಿಲುಗಳನ್ನು ತೆರೆಯುವುದಕ್ಕೆ ಕೀಲಿ ಕೈ ಸಿಕ್ಕಂತಾಗಿ ಬಿಟ್ಟಿತು. ಅಲ್ಲಿಯವರೆಗೆ ಮೂರು ನಾಲ್ಕು ಬಾರಿ ಮುಂಗಾರು ಮಳೆಯನ್ನು ನೋಡಿದ್ದರೂ, ಇನ್ನೇನು ನೋಡುವುದು ಉಳಿದಿದೆ ಎಂಬ ಅಲಕ್ಷ್ಯವಿದ್ದರೂ ಅವೆಲ್ಲವನ್ನೂ ಬದಿಗಿಟ್ಟು ಬಿಟ್ಟ ಕಣ್ಣು ಬಿಟ್ಟಂತೆ, ಅಕ್ಕ ಪಕ್ಕದವರೊಂದಿಗೆ ಮಾತೂ ಆಡದಂತೆ, ಹಾಸ್ಯದ ಸನ್ನಿವೇಶಗಳಲ್ಲಿ ನಗಲಿಕ್ಕೂ ಆಗದೆ, ದುಃಖದ ಸನ್ನಿವೇಶಗಳಲ್ಲಿ ಅಳಲೂ ಆಗದೆ ಸಿನೆಮ ನೋಡಿದೆ.
ಮುಂಗಾರು ಮಳೆ ನೋಡಿದ ತರುವಾಯ ರಾತ್ರಿ ಎಲ್ಲರೂ ದೊಡ್ಡ ಪ್ರಮಾಣದ ನಿರೀಕ್ಷೆ ಕುತೂಹಲಗಳಿಂದ ತುಂಬಿದ್ದರು. ಆಗಷ್ಟೇ ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಶಿಬಿರಕ್ಕೆ ದರ್ಶನ ಕೊಟ್ಟು, ಪುಸ್ತಕ ಮಾರಿ, ಫೋಟೊ ತೆಗೆಸಿಕೊಂಡು, ಮನರಂಜಿಸಿ ಹೋಗಿದ್ದರು. ಮರುದಿನ ಬೆಳಿಗ್ಗೆ ಯೋಗರಾಜ್ ಭಟ್ಟರು ಬರುವವರಿದ್ದಾರೆ ಎಂಬ ಸುದ್ದಿ ಹರಡಿತ್ತು. ಹೀಗಾಗಿ ಬೆಳಗಾಗುವುದನ್ನು ಕಾಯುತ್ತ ಶಿಬಿರಾರ್ಥಿಗಳು ಮಲಗಿದ್ದರು.
ಬೆಳಿಗ್ಗೆ ತಿಂಡಿ ತಿನ್ನುವಾಗ ಭಟ್ಟರು ಬರುವುದಿಲ್ಲ ಎಂಬ ವಾರ್ತೆ ತಲುಪಿತು. ಮುಂಗಾರು ಮಳೆಯ ಕುರಿತು ವಿಮರ್ಶೆಗಳನ್ನು ಮಾಡುವುದಕ್ಕೆ ಐದೈದು ಮಂದಿಯ ತಂಡಗಳನ್ನು ಮಾಡಲಾಯ್ತು. ಮೊಗ್ಗಿನ ಮನಸ್ಸು ಸಿನೆಮಾ ನೋಡಿದಾಗ ನಡೆಸಿದಂತೆಯೇ ತಂಡದಲ್ಲಿ ಚರ್ಚಿಸಿ ಆ ತಂಡದ ವಿಮರ್ಶೆಯನ್ನು ಒಬ್ಬರು ಮಂಡಿಸಬೇಕಿತ್ತು. ಆದರೆ ಈಗ ಇದ್ದ ಒಂದೇ ವ್ಯತ್ಯಾಸವೆಂದರೆ ವಿಮರ್ಶೆಯನ್ನು ಮಂಡಿಸುವಾಗ ಸಿನೆಮಾದ ನಿರ್ದೇಶಕರಾಗಲಿ, ಸಿನೆಮಾಗೆ ಸಂಬಂಧ ಪಟ್ಟವರಾಗಲಿ ಅಲ್ಲಿ ಇರದಿದ್ದದ್ದು.
ಹಿಂದಿನ ರಾತ್ರಿಯ ವಿಮರ್ಶೆಗಳಿಗೆ ಹೋಲಿಸಿದರೆ ಮುಂಗಾರು ಮಳೆ ವಿಮರ್ಶೆಗಳು ಒಂದು ಫೋಕಸ್ ಹೊಂದಿದ್ದವು. ಯಾವ ಅಂಶಗಳು ವಿಮರ್ಶೆಯ ಹೆಸರಿನಲ್ಲಿ ಮಂಡಿಸಲ್ಪಡಬಾರದು ಎನ್ನುವ ಸ್ಪಷ್ಟತೆ ಸಿಕ್ಕಿತ್ತು. ನಾಯಕ, ನಾಯಕಿಯರ ನಟನೆ, ಮನೋ ಮೂರ್ತಿ ಸಂಗೀತ, ಕಾಯ್ಕಿಣಿ ಸಾಹಿತ್ಯ ಇವೆಲ್ಲವುಗಳನ್ನು ದಾಟಿಕೊಂಡು ಬಹುತೇಕರು ಮುಂದೆ ಹೋಗಿದ್ದ ಕುರಿತು ನಿಚ್ಚಳವಾದ ಸೂಚನೆಗಳು ಕಂಡುಬಂದವು. ಹಿಂದಿನ ಪ್ರಯತ್ನಕ್ಕೆ ಹೋಲಿಸಿದರೆ ಬಹುದೊಡ್ಡ ಜಂಪ್ ಮಾಡಿಯಾಗಿತ್ತು.
ಆದರೆ ಪಾತ್ರಗಳು ಒಳ್ಳೆಯವು ಕೆಟ್ಟವು, ನಿರ್ದೇಶಕ ಏನಂದುಕೊಂಡಿದ್ದಿರಬಹುದು ಮೊದಲಾದ ಸಮಸ್ಯೆಗಳನ್ನಿಟ್ಟುಕೊಂಡು ವಿಮರ್ಶೆ ಹಲವು ಸಲ ದಾರಿ ತಪ್ಪಿತು. ಮರಗಳಿಗಾಗಿ ಕಾಡನ್ನು ಮರೆತಂತೆ ದಿಕ್ಕುತಪ್ಪಿದ ಸಂದರ್ಭಗಳೂ ಇದ್ದವು. ಇವೆಲ್ಲಾ ದೋಷಗಳನ್ನು ಗಮನದಲ್ಲಿಟ್ಟುಕೊಂಡರೂ ಸಿನೆಮಾವನ್ನು ನೋಡುವ, ಗ್ರಹಿಸುವ ರೀತಿಯಲ್ಲಿ ಕ್ರಾಂತಿಕಾರಕವಾದ ಬದಲಾವಣೆ ಅವಶ್ಯವಾಗಿಯೂ ಆಗಿಹೋಗಿತ್ತು, ಹಿಂದಿರುಗಿ ಹೋಗಲಾಗದಂತಹ ಹಂತವನ್ನು ಶಿಬಿರದಲ್ಲಿ ಭಾಗವಹಿಸಿದ್ದರಲ್ಲಿ ಕೆಲವರಾದರೂ ತಲುಪಿಕೊಂಡಿದ್ದರು.
ನಮ್ಮ ಗ್ರಹಿಕೆ, ದೃಷ್ಟಿಕೋನ, ಮನಸ್ಥಿತಿಗಳನ್ನು ಆಮೂಲಾಗ್ರವಾಗಿ ಬದಲಾಯಿಸಿಕೊಳ್ಳಬೇಕು ಎಂದು ಅಪೇಕ್ಷಿಸುವ ಸಿನೆಮಾ ಓದನ್ನು ಮೂರು ದಿನಗಳ ಒಂದು ಶಿಬಿರ ಕಲಿಸಿಬಿಡಬೇಕು ಎಂದು ನಿರೀಕ್ಷಿಸುವುದು ಮೂರ್ಖತನ. ಇಡೀ ಜೀವಮಾನ ಶ್ರದ್ಧೆಯಿಂದ ಪ್ರಯತ್ನಿಸಿದರೂ ಲಭಿಸದ ಆ ಪಕ್ವತೆಯನ್ನು ದುಡ್ಡು ಕೊಟ್ಟು ಪಡೆಯಲು, ಪಾಠ ಕೇಳಿ ಸಿದ್ಧಿಸಿಕೊಳ್ಳಲು ಸಾಧ್ಯ ಎನ್ನುವ ನಂಬಿಕೆಯೂ ಪೆದ್ದುತನದಿಂದ ಹುಟ್ಟುವುದು.