ಕೃಷ್ಣನ್ ಲವ್ ಸ್ಟೋರಿ ಸಂವಾದ ನಾನು ಕಂಡಂತೆ

ಜನಪ್ರಿಯವಾದ ಮುಖ್ಯವಾಹಿನಿಯ ಸಿನೆಮಾಗಳ ಕುರಿತು ಅಕಾಡೆಮಿಕ್ ಶಿಸ್ತಿನಲ್ಲಿ ಚರ್ಚೆಗಳು ನಡೆಯುವಂತಹ ವಾತಾವರಣ ಕನ್ನಡದಲ್ಲಿ ಸೃಷ್ಟಿಯಾಗಬೇಕು. ಭಾರಿ ಪ್ರಮಾಣದ ಪ್ರಭಾವವನ್ನು ಉಂಟು ಮಾಡಬಲ್ಲ ಸಿನೆಮಾ ಎಂಬ ಮಾಧ್ಯಮದಲ್ಲಿ ನಡೆಯುತ್ತಿರುವ ಪ್ರಯತ್ನಗಳಿಗೆ, ಘಟಿಸುತ್ತಿರುವ ಸ್ಥಿತ್ಯಂತರಗಳಿಗೆ ಕನ್ನಡದಲ್ಲಿ ಯಾವ ಮಟ್ಟದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ? ಪ್ರಜ್ಞಾವಂತಿಕೆಯ ಪ್ರತಿಸ್ಪಂದನೆ ದೊರೆಯುತ್ತಿದೆಯೇ ಎನ್ನುವ ಪ್ರಶ್ನೆಗಳನ್ನು ಕೇಳಿಕೊಂಡರೆ ಸಂವಾದದಂತಹ ಪ್ರಯತ್ನಗಳ ಆವಶ್ಯಕತೆ ನಿಚ್ಚಳವಾಗಿ ಕಾಣುತ್ತದೆ. kls1

“ಕೃಷ್ಣ”ನ್ ಲವ್ ಸ್ಟೋರಿ, ‘ಫುಲ್ ಫೀಲಿಂಗ್ ಮಗಾ’ ಸಿನೆಮಾದ ಸಂವಾದ ಕೂಡ ಪಾಪ್ಯುಲರ್ ಚಿತ್ರವೊಂದನ್ನು ಗ್ರಹಿಸುವ, ಅದಕ್ಕೆ ಪ್ರತಿಕ್ರಿಯಿಸುವ ಸಾಂಪ್ರದಾಯಿಕ ಪದ್ಧತಿಯನ್ನು ಪ್ರಶ್ನಿಸುವ, ಹೊಸ ಪದ್ಧತಿಯನ್ನು ಅನ್ವೇಷಿಸುವ ಪ್ರಯತ್ನವಾಗಿ ಜರುಗಿತು. ಸಿನೆಮಾ ಪ್ರದರ್ಶನದಲ್ಲಿ ಭಾಗವಹಿಸಿದಷ್ಟು ಸಂಖ್ಯೆಯಲ್ಲಿ ಸಂವಾದದಲ್ಲಿ ಪ್ರೇಕ್ಷಕರು ಭಾಗವಹಿಸಿರಲಿಲ್ಲ. ಇದಕ್ಕೆ ಪ್ರಚಾರದ ಕೊರತೆಯ ಜೊತೆಗೆ ‘ಸಂವಾದ’ದ ಸ್ವರೂಪದ ಬಗ್ಗೆ ಮಾಹಿತಿಯ ಕೊರತೆಯೂ ಕಾರಣವೆನಿಸುತ್ತದೆ, ಅರವತ್ತು ತುಂಬಿದವರಿಗೆ ಅಭಿನಂದನಾ ಗ್ರಂಥ ಅರ್ಪಿಸುವಂತೆ ಬಹುತೇಕ ಚಿತ್ರ ಸಂವಾದಗಳು ಜರುಗುವುದರಿಂದ, ಚಿತ್ರ ನಿರ್ಮಾಪರು ಹಾರ ತುರಾಯಿಗಳೊಂದಿಗೆ ಬೆನ್ತಟ್ಟುವಿಕೆಯನ್ನೂ ವಿನಿಯಮ ಮಾಡಿಕೊಳ್ಳುವುದಕ್ಕೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಸಂವಾದ. ಡಾಟ್ ಕಾಮ್‌ನ ಕಾರ್ಯಕ್ರಮದ ಬಗ್ಗೆ ಜನರು ಅನಾಸಕ್ತಿ ತೋರಿಸುವುದು ಸಾಮಾನ್ಯ ಅನ್ನಿಸುತ್ತದೆ. ಕಾರ್ಯಕ್ರಮದ ಪ್ರಾರಂಭದ ಮುನ್ನವೇ ಚಿತ್ರ ತುಂಬಾ ಚೆನ್ನಾಗಿತ್ತು, ಹತ್ತು ಸಲ ನೋಡಿದೆ, ಹೀರೋ ಸೂಪರ್ ಎನ್ನುವಂತಹ ಅಭಿನಂದನೆಗಳು ಬೇಡ, ಚಿತ್ರ ತಂಡವನ್ನು uncomfortable zoneಗೆ ತಳ್ಳಿ ಎಂದ ಪ್ರಸ್ತಾವನೆಯ ಬಗ್ಗೆ ಪ್ರಚಾರ ದೊರೆಯಬೇಕಿದೆ. ಇಂಥ ಹೆಚ್ಚು ಸಂವಾದ ಕಾರ್ಯಕ್ರಮಗಳು ನಡೆದರೆ ಕ್ರಮೇಣ ಆ ತಿಳುವಳಿಕೆ ಹರಡುವುದು ಎಂದು ಆಶಿಸಬಹುದು.

ಸಂವಾದದ ಮೊದಲ ಭಾಗದಲ್ಲಿ ಚಿತ್ರ ತಂಡದೊಂದಿಗೆ ಸಂವಾದ.ಡಾಟ್ ಕಾಮ್ ಚರ್ಚೆಗೆ ತೊಡಗಿತು. ಕೃಷ್ಣನ ಲವ್ ಸ್ಟೋರಿಯನ್ನು ಪ್ರೀತಿ, ಪ್ರಣಯದ ಅಂಶಗಳನ್ನು ಬದಿಗಿಟ್ಟು ವಿಮರ್ಶಿಸಿದ ಶೇಖರ್ ಪೂರ್ಣರವರು ಈ ಚಿತ್ರ ಮೇಲ್ ಮಧ್ಯಮ ವರ್ಗ ಹಾಗೂ ಕೆಳಮಧ್ಯಮ ವರ್ಗಗಳ ನಡುವಿನ ವರ್ಗ ಸಂಘರ್ಷವನ್ನು ಬಿಂಬಿಸುವ ಸಿನೆಮಾ ಎನ್ನುವ ಮೂಲಕ ಚಿತ್ರದ ವಿಮರ್ಶೆಗೆ ಹೊಸ ಆಯಾಮವನ್ನು ಕೊಟ್ಟರು. ಗಾರ್ಮೆಂಟ್ಸ್ ನಲ್ಲಿ ದುಡಿಯುವ ಕೆಳಮಧ್ಯಮ ವರ್ಗದ ಉಮಾಶ್ರೀಯ ಬದುಕು ಹಾಗೂ ಕುಟುಂಬ ಬೊಟಿಕ್ ಶಾಪ್ ಇಟ್ಟು ಅದೇ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ತಯಾರಾಗುವ ಬಟ್ಟೆಗಳನ್ನು ಮಾರುವ ಮೇಲ್ಮಧ್ಯಮ ವರ್ಗದ ಕೃಷ್ಣನ ಬದುಕಿನಿಂದ ಹೇಗೆ ನಲುಗುತ್ತದೆ ಎನ್ನುವುದನ್ನು ಚಿತ್ರ ಹೇಳುತ್ತದೆ ಎಂದು ವಿವರಿಸಿದರು.

ತನ್ನ ಅಂತಸ್ಥಿನ ಅರಿವಿದ್ದೂ, ಬಡತನವನ್ನು ಹೆಗಲ ಮೇಲಿನ ಹೊರೆಯೆಂಬಂತೆ ಕಾಣದೆ ರೆಕ್ಕೆಗಳಿಗೆ ಹಾಕಿದ ಸರಪಳಿ ಎಂದು ಭಾವಿಸಿ ತನ್ನ ಆಸೆಗಳನ್ನು ಹತ್ತಿಕ್ಕಿಕೊಂಡು ಸ್ವಾಭಿಮಾನಿಯಾಗಿ ಬದುಕುವವಳು ನಾಯಕಿ ಗೀತಾ. ಆಕೆಯನ್ನು ಕೊಲ್ಲುವುದು ಆಕೆಯ ಪಶ್ಚಾತಪವಾಗಲಿ, ಪಾಪಪ್ರಜ್ಞೆಯಾಗಲಿ ಅಲ್ಲ, ಆಕೆಯನ್ನು ಪ್ರೀತಿಸುತ್ತಿದ್ದ ಕೃಷ್ಣನ ಡಬಲ್ ಸ್ಟ್ಯಾಂಡರ್ಡ್ ಎನ್ನುವ ಮೂಲಕ ಸಣ್ಣ ಆಘಾತವನ್ನು ನೀಡಿದರು. ನೀನು ತಪ್ಪು ಮಾಡಿದರೂ, ಪಾಪವನ್ನು ಮಾಡಿದ್ದರೂ ನಿನ್ನ ಪಶ್ಚಾತಾಪ ಪಟ್ಟಿರುವೆ. ಹೀಗಾಗಿ ನೀನು ಒಳ್ಳೆಯವಳು. ಒಳ್ಳೆಯವರಿಗಷ್ಟೇ ಪಶ್ಚಾತಾಪವಿರಲಿಕ್ಕೆ ಸಾಧ್ಯ ಎನ್ನುವ ಕೃಷ್ಣ ಆಕೆಯನ್ನು ತೆರೆದ ಬಾಹುಗಳಲ್ಲಿ ಸ್ವೀಕರಿಸಲು ಸಿದ್ಧನಾದರೂ ಆಕೆ ಮಾಡಿದ್ದು ‘ಪಾಪ’(sin) ಎನ್ನುವುದನ್ನು ಆಡಿತೋರಿಸುತ್ತಾನೆ. ತಪ್ಪಿತಸ್ಥಳೂ, ಪಾಪಿಯೂ, ಕಳಂಕಿತೆಯೂ ಆದ ನಿನ್ನನ್ನು ನಾನು ಸ್ವೀಕರಿಸುವೆ ಎನ್ನುವ ಕೃಷ್ಣನ ಔದಾರ್ಯವೇ ಗೀತಾ ಪಾಲಿಗೆ ಉರುಳಾಗುತ್ತದೆ. ಗೆಲುವಿನ ಭಿಕ್ಷೆ ನೀಡಿದರೆಂಡು ತಾನು ಅಣ್ಣನ ಜೇಬಿನಿಂದ ಕದ್ದು ತಂದ ಹಣದಲ್ಲಿ ಐಸ್ ಕ್ರೀಮ್ ಕೊಡಿಸಿ ಮುದ್ದು ಮಾಡುವ ಮಕ್ಕಳನ್ನೇ ಹೊಡೆಯುವ ಗೀತಾ ಕೃಷ್ಣನ ಪ್ರೀತಿಯನ್ನು, ಅದರ ಔದಾರ್ಯವನ್ನು ಸಹಿಸಲಾಗದೆ ಸಾಯುವಳು ಎನ್ನುವ ರೀಡಿಂಗ್ ಕೊಟ್ಟರು.

ಆದರೆ ಇದನ್ನೊಪ್ಪದ ಚಿತ್ರ ನಿರ್ದೇಶಕ ಶಶಾಂಕ್ ಹಾಗೂ ನಾಯಕ ಅಜಯ್ ರಾವ್ ಸಮಚಿತ್ತದಿಂದಲೇ ಕೃಷ್ಣನ ಪ್ರೀತಿಯ ಆಳವನ್ನು ವಿವರಿಸಿದರು. ಕ್ರಿಕೆಟ್ ಆಡುವ, ಕಿರಾಣಿ ಅಂಗಡಿಯಿಂದ ಮನೆ ನಡೆಯುವ, ಅಜ್ಜನ ಹೆಸರಿನ ಬೈಕನ್ನು ಪ್ರೀತಿಸುವ ನಮ್ಮಲ್ಲಿ ಒಬ್ಬನಂತಿರುವ ನಾಯಕ ತನ್ನ ಪ್ರೀತಿ ನಿಷ್ಕಾಮವಾದದ್ದು ಎನ್ನುವುದನ್ನು ಗೀತಾಳಿಗೆ ಅರ್ಥ ಮಾಡಿಸಲು ಪ್ರಯತ್ನಿಸುತ್ತಾನೆ ಎಂದರು. ಒಬ್ಬ ವ್ಯಕ್ತಿಯನ್ನು ಆತ ಏನಾಗಿರುವನೋ ಅದಕ್ಕಾಗಿ ಪ್ರೀತಿಸುವುದು ಶ್ರೇಷ್ಠವಾದ ಪ್ರೇಮಿಯ ಲಕ್ಷಣ. ತಮ್ಮ ಚಿತ್ರದ ನಾಯಕ ಈ ತರಹದ ಪ್ರೇಮಿ ಎಂದು ಸಮರ್ಥಿಸಿಕೊಂಡರು. ತಮ್ಮಿಡೀ ಚಿತ್ರಕತೆಯನ್ನು ತೀರಾ ಭಿನ್ನವಾಗಿ ರೀಡ್ ಮಾಡಿದರೂ ತಾಳ್ಮೆ ಕಳೆದುಕೊಳ್ಳದೆ ಅಜಯ್ ರಾವ್ ಹಾಗೂ ಶಶಾಂಕ್ ಪ್ರತಿಭಟಿಸಿದ್ದು ಸಂವಾದ ಎನ್ನುವುದು ಯಾವ ಸ್ಥರದಲ್ಲಿ ನಡೆಯಬೇಕು ಎನ್ನುವುದಕ್ಕೆ ಉದಾಹರಣೆಯಾಗಿತ್ತು.

ಗಾಂಧಿನಗರದ ಚೌಕಟ್ಟಿನಲ್ಲಿಯೇ ಚಿತ್ರ ರೂಪು ಗೊಂಡಿದ್ದರೂ ಇದು ಹೇಗೆ ಚಿತ್ರರಂಗದಲ್ಲಿನ ಹಳೆಯ ಪರಿಭಾಷೆಗಳನ್ನು ಮುರಿದಿದೆ ಎನ್ನುದನ್ನು ಶೇಖರ್ ಪೂರ್ಣ ವಿವರಿಸಿದರು. ಚಿತ್ರವನ್ನು ಅದರ ಕಥಾ ಹಂದರದ ಪರಿಧಿಯಲ್ಲೇ ಹೇಗೆ ‘ಓದು’ವುದು ಎಂದು ಮಾತನಾಡಿ ಪ್ರೇಕ್ಷಕರಿಗೆ ಪ್ರಶ್ನೆಗಳನ್ನು ಕೇಳಲು ಅವಕಾಶ ಮಾಡಿಕೊಟ್ಟರು.

ಪ್ರೇಕ್ಷಕರು ಸಹ ಚಿತ್ರ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸುವ, ನಿರ್ದೇಶಕರೇ ಗುರುತಿಸದಿದ್ದ ಅಂಶಗಳಿಗೆ ಕಣ್ಣುತೆರೆಸುವ ಪ್ರಶ್ನೆಗಳನ್ನು ಕೇಳಿದರು. ಚಿತ್ರದ ಶೀರ್ಷಿಕೆ ಕೃಷ್ಣನ ಲವ್ ಸ್ಟೋರಿಯಾದರೂ ಇದು ಗೀತಾ ಲೈಫ್ ಸ್ಟೋರಿಯಾಗಿರುವುದು ಉದ್ದೇಶಪೂರ್ವಕವೇ ಎನ್ನುವ ಪ್ರಶ್ನೆ. ನಾಯಕಿ ಪ್ರಧಾನ ಚಿತ್ರವೆಂದು ಒಪ್ಪಿಕೊಳ್ಳಲು ನಿರಾಕರಿಸಿದ ನಿರ್ದೇಶಕರು ಎಲ್ಲಾ ಪಾತ್ರಗಳೂ ತಮ್ಮ ತೂಕ ಹೊಂದಿರುವುದಾಗಿ ನಿರೂಪಿಸಿದರು. ಸಿನೆಮಾದಲ್ಲಿರುವ, ಉಳಿದೆಲ್ಲ ಪಾತ್ರಗಳಷ್ಟೇ ಮುಖ್ಯವಾದ ‘ಹೊಂಬೇಗೌಡ’ ಎನ್ನುವ ಹೆಸರಿನ ಬೈಕಿನ ದೃಷ್ಟಿಯಿಂದ ಚಿತ್ರಕತೆಯನ್ನು ಪುನರ್ನಿರ್ಮಿಸಿ ಅಚ್ಚರಿ ಉಂಟುಮಾಡಿದ ಪ್ರಶ್ನೆ. ಎಲ್ಲರ ಕಿಸೆಯಲ್ಲಿ ಮೊಬೈಲ್ ಇದ್ದರೂ ಅತಿ ಪ್ರಮುಖವಾದ ಸುದ್ದಿಯನ್ನು ಮುಟ್ಟಿಸುವುದಕ್ಕಾಗಿ ಸೈಕಲ್ ತುಳಿದು ಬರುವ ಪಾತ್ರದ ಆವಶ್ಯಕತೆಯೇನು ಎನ್ನುವ ಪ್ರಶ್ನೆ. ತಂದೆ ತಾಯಿಗಳ ಪ್ರೀತಿಯಲ್ಲಿ, ನೆಮ್ಮದಿಯ ಕುಟುಂಬದಲ್ಲಿ ಬೆಳೆದ ನಾಯಕನ ಪಾತ್ರ ಹಾಗೂ ತಂದೆಯಿಲ್ಲದ, ಬೇಜವಾಬ್ದಾರಿಯ ರೌಡಿ ಅಣ್ಣನಿರುವ ಕುಟುಂಬದಲ್ಲಿ ಬೆಳೆದ ನಾಯಕಿಯ ಪಾತ್ರಗಳ ಮನಸ್ಥಿತಿಗಳ ನಡುವೆ ಇರುವ ವ್ಯತ್ಯಾಸ ಗುರುತಿಸಿದ ಪ್ರಶ್ನೆ. ದುಬಾರಿ ಕ್ಯಾಮರಾ ಬಳಸದೆಯೂ ಅತ್ಯುತ್ತಮ ಪರಿಣಾಮ ಬೀರುವುದಕ್ಕೆ ತಂತ್ರಜ್ಞಾನಕ್ಕಿಂತ, ತಂತ್ರಜ್ಞ ಮುಖ್ಯವಲ್ಲವೇ ಎನ್ನುವ ಪ್ರಶ್ನೆಗಳಿದ್ದಂತೆ ಚಿತ್ರದಲ್ಲಿನ ಅಂತ್ಯವನ್ನು ಒಪ್ಪದೆ ಪ್ರತಿಭಟಿಸಿದ ಪ್ರೇಕ್ಷಕರ ಪ್ರಶ್ನೆಗಳೂ ಸಂವಾದದಲ್ಲಿ ಹರಿದು ಬಂದವು. ಪ್ರೀತಿಗಿಂತ ಬದುಕು ಕಟ್ಟಿಕೊಳ್ಳುವ ಆಯ್ಕೆ ಆರಿಸಿಕೊಳ್ಳುವ ಪ್ರಬುದ್ಧತೆಯ ಗೀತಾ ಕಡೆಗೆ ಸಾವಿಗೆ ಶರಣಾದದ್ದು ಯಾಕೆ ಎಂದು ಒಬ್ಬರು ಪ್ರಶ್ನಿಸಿದರೆ, ಆಕೆಯನ್ನು ಸಾಯಿಸುವ ಮೂಲಕ ನಿರ್ದೇಶಕರು ಪ್ರೇಮಿಗಳಿಗೆ ಏನು ಸಂದೇಶ ನೀಡುತ್ತಾರೆ ಎನ್ನುವ ಸವಾಲನ್ನು ನಿರ್ದೇಶಕರು ಎದುರಿಸಬೇಕಾಯಿತು.

Leave a comment