Posts tagged ‘religion’

November 2, 2008

ಎಲ್ಲ ದೇವರಿಗೂ ಕೈಮುಗಿಯುವವನ ರಿಲೀಜನ್?

ಭಾರತೀಯರು ಅಂದರೆ ಹಿಂದೂ ಜೀವನ ಪದ್ಧತಿಯನ್ನು ಒಪ್ಪಿಕೊಂಡವರು, ಹಿಂದೂ ನಂಬಿಕೆಯನ್ನು ಬೆಳೆಸಿಕೊಂಡವರು ಎಂದೂ ಬೇರೊಂದು ದೇಶದ ಮೇಲೆ, ಬೇರೊಂದು ಧರ್ಮದ ಮೇಲೆ ಆಕ್ರಮಣ ಮಾಡಿದವರಲ್ಲ. ಹಿಂದೂಗಳು ಸ್ವಭಾವತಃ ಸಹಿಷ್ಣುಗಳು. ಆದರೆ ಅನೇಕರು ಇದನ್ನು ಹಿಂದೂಗಳ ಹೇಡಿತನ ಎಂದು ಭಾವಿಸಿದ್ದಾರೆ. ಹಿಂದೂಗಳ ಮೇಲೆ, ಅವರ ನಂಬಿಕೆ, ಶ್ರದ್ಧೆಗಳ ಮೇಲೆ ಆಕ್ರಮಣ ಮಾಡಿ ಹಿಂದೂಗಳನ್ನು ಕೆಣಕುವ ಪ್ರಯತ್ನ ಮಾಡುತ್ತಾರೆ. ಹಿಂದೂಗಳು ಶಾಂತಿಪ್ರಿಯರು ಹಾಗಂತ ಹೇಡಿಗಳಲ್ಲ. ಹಿಂದೆದೂ ಆಕ್ರಮಣ ಮಾಡಿಲ್ಲ ಎಂದ ಮಾತ್ರಕ್ಕೆ ಮೈಮೇಲೆ ಏರಿ ಬಂದವರ ವಿರುದ್ಧ ಹೋರಾಡಲಾರರು ಎಂದು ಭಾವಿಸುವುದು ಮೂರ್ಖತನ. ಒಬ್ಬೊಬ್ಬ ಹಿಂದೂ ತಿರುಗಿ ನಿಂತರೆ ಪುರುಷ ಸಿಂಹನಾಗುತ್ತಾನೆ. ತನ್ನ ಕೇಸರಗಳನ್ನು ಕೊಡವಿ ನಿಂತ ದೈತ್ಯನಾಗುತ್ತಾನೆ. ಎಚ್ಚರ!’


ಎಂಬ ಧಾಟಿಯಲ್ಲಿ ಬರೆದ ಹಲವು ಲೇಖನಗಳನ್ನು, ಪುಸ್ತಕಗಳನ್ನು, ಸಾಹಿತ್ಯವನ್ನು ಓದಿದ್ದೇನೆ. ಹಿಂದೂಗಳು ಒಗ್ಗಟ್ಟಾಗಬೇಕು. ತಮ್ಮೊಳಗಿನ ಬೇಧ ಭಾವವನ್ನು ಮರೆತು ಒಂದು ಗೂಡಿ ಹೊರಗಿನವರ ವಿರುದ್ಧ ಸಿಡಿದೆದ್ದು ನಿಲ್ಲಬೇಕು ಎನ್ನುವ ರೋಮಾಂಚನಕಾರಿ ಭಾಷಣಗಳನ್ನು ಕೇಳಿದ್ದೇನೆ. ಹಲವು ಸಂದರ್ಭಗಳಲ್ಲಿ ನನ್ನ ಸುತ್ತಮುತ್ತಲಿನ ಪರಿಸ್ಥಿತಿ, ಬೆಳವಣಿಗೆಗಳು ವಿಚಾರ ಧಾರೆಗೆ ಪೂರಕವಾಗಿ ಕಂಡು ಸ್ವಾಭಿಮಾನ ಎಂಬುದೊಂದೇ ಹಿಂದೂಗಳು ಕಳೆದುಕೊಂಡಿರುವುದು ಎಂಬ ನಿರ್ಧಾರಕ್ಕೆ ಬಂದಿದ್ದೇನೆ.ಕನ್ನಡಿಗರಲ್ಲಿ ಕನ್ನಡ ಭಾಶೆಯ ಬಗೆಗೆ ಸ್ವಾಭಿಮಾನವೇ ಇಲ್ಲ, ಹೀಗಾದರೆ ಕನ್ನಡದ ಅಳಿವು ನಿಶ್ಚಿತ ಎಂದು ಭವಿಷ್ಯ ನುಡಿವವರ ಮಾತುಗಳನ್ನು ನೂರಾರು ವರ್ಷಗಳಿಂದ ಕೇಳುತ್ತಾ, ಕನ್ನಡದಲ್ಲೇ ಅದಕ್ಕೆ ನಮ್ಮ ಧ್ವನಿಯನ್ನೂ ಸೇರಿಸುತ್ತಾ ಅದನ್ನು ರಾಜ್ಯಾದ್ಯಂತ ಹೆಚ್ಚು ಚಾಲ್ತಿಯಲ್ಲಿರುವ ಚಿಂತನೆಯಾಗಿ ರೂಪಿಸಿವಲ್ಲಿ ಶ್ರಮಿಸಿದ್ದೇವೆ. ನಾವು ಕನ್ನಡ ಮಾತಾಡುವ ಸಂದರ್ಭಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ಕನ್ನಡದ ದುಸ್ಥಿತಿಯ ಬಗ್ಗೆ ಲೊಚಗುಟ್ಟುತ್ತೇವೆ. ಹಿಂದೂ ಧರ್ಮದ ಬಗೆಗೂ ನಾವು ಹೀಗೆಯೇ ವರ್ತಿಸುತ್ತಿದ್ದೇವೆಯೇ? ಹಿಂದೆ ರಾಣಾ ಪ್ರತಾಪ, ಶಿವಾಜಿಯ ಕಾಲದಿಂದಲೂ ಹಿಂದೂಗಳು ಸಿಡಿದೇಳದಿದ್ದರೆ ಅವರ ನಾಶ ನಿಶ್ಚಿತ ಎಂದೇ ಹೇಳುತ್ತಾ ಬಂದಿರುವರು. ಅದೂ ಹಿಂದೂಗಳು ಎಚ್ಚರರಾಗಿರಲಿಲ್ಲ. ಈಗಿನ ಹಿಂದೂ ಮುಖಂಡರ ಪ್ರಕಾರ ಇಂದಿಗೂ ಹಿಂದೂಗಳು ಎಚ್ಚರವಾಗಿಲ್ಲ. ಆದರೂ ಹಿಂದುತ್ವವೆಂಬುದು ಜೀವಂತವಾಗಿದೆ ಎಂದು ನಂಬುತ್ತಾರೆ! ಇದಕ್ಕಿಂತ ಸೋಜಿಗದ ಸಂಗತಿ ಉಂಟೆ?


ಹಿಂದೂ’ ಎನ್ನುವ ಪದದ ವಿವರಣೆಯೇ ಅತ್ಯಂತ ಜಟಿಲವಾದದ್ದು. ಅದನ್ನೊಂದು ಧರ್ಮ ಎಂದು ಕರೆಯುವುದು ಸುಲಭವಾದರೂ ಧರ್ಮದ ವ್ಯಾಖ್ಯಾನಕ್ಕೆ ಅದು ಒಗ್ಗಿಕೊಳ್ಳುವುದಿಲ್ಲ. ಮಹಮ್ಮದ್ ಒಬ್ಬರೇ ಪ್ರವಾದಿ, ಅಲ್ಲಾಹುವೊಬ್ಬನೇ ದೇವರು, ಕುರಾನ್ ಒಂದೇ ಧಾರ್ಮಿಕ ಗ್ರಂಥ, ಅದರಲ್ಲಿ ಹೇಳಿರುವುದು ಮಾತ್ರ ಸತ್ಯ ಎಂದು ನಂಬಿದವನು ಮುಸಲ್ಮಾನನಾಗಬಲ್ಲ. ಕ್ರಸ್ತನೊಬ್ಬನೇ ದೇವರ ಮಗ, ದೇವನು ಏಳು ದಿನದಲ್ಲಿ ಜಗತ್ತನ್ನು ಸೃಷ್ಟಿಸಿದ, ಬೈಬಲ್ ಒಂದೇ ಅಧಿಕೃತ ದೇವರ ಸಂದೇಶ ಎಂಬುದರಲ್ಲಿ ನಂಬಿಕೆ ಇರಿಸಿದವ ಕ್ರೈಸ್ತನಾಗಬಲ್ಲ. ಆದರೆ ಹಿಂದೂ ಆದವನ ನಂಬಿಕೆ ಯಾವುದು? ಹಿಂದೂಗಳು ಒಬ್ಬ ದೇವರನ್ನು ಪೂಜಿಸುವುದಿಲ್ಲ. ಮುಕ್ಕೋಟಿ ಜನರಿಗೆ ಮುಕ್ಕೋಟಿ ದೇವರಗಳನ್ನು ಸೃಷ್ಠಿಸಿಕೊಳ್ಳುವ ಸ್ವಾತಂತ್ರ್ಯ ಕೊಟ್ಟ ಚಿಂತನೆ ಅವರದು. ಹಾಗೆಯೇ ಮುಕ್ಕೋಟಿ ಜನರಿಗೆ ಮುಕ್ಕೋಟಿ ನಂಬಿಕೆಗಳನ್ನು ಬೆಳೆಸಿಕೊಳ್ಳುವ ಅವಕಾಶ ಕೊಟ್ಟ ಸಮಾಜ ಅವರದ್ದಾಗಿತ್ತು. ಧರ್ಮದ ಕೇಂದ್ರ ಬಿಂದುವಾದ ದೇವರ ಬಗ್ಗೆಯೇ ಹಿಂದೂ ಚಿಂತನಶಾಲೆಯಲ್ಲಿ ಸ್ಪಷ್ಟವಾದ ವ್ಯಾಖ್ಯಾನ ಇಲ್ಲ. ದೇವರು ಇದ್ದಾನೆ, ಸ್ವರ್ಗ, ನರಕಗಳಿವೆ, ಪುನರ್ಜನ್ಮವಿದೆ, ಕರ್ಮ ಸಿದ್ಧಾಂತದ ಪ್ರಕಾರ ನಮ್ಮ ಜೀವನದ ದಿಕ್ಕು ನಿರ್ಧಾರವಾಗುತ್ತದೆ, ಮನುಷ್ಯ ತನ್ನ ಪೂರ್ವಾರ್ಜಿತ ಕರ್ಮಫಲದ ಬಂಧಿ, ಆತ ಸ್ವತಂತ್ರನಲ್ಲದೇವರು ಆಡಿಸುವ ನಾಟಕದಲ್ಲಿನ ಪಾತ್ರಧಾರಿ ಮಾತ್ರ, ಜೀವನ ನಶ್ವರವಾದದ್ದು, ನಿಜವಾದ ಬದುಕು ಇಲ್ಲಿಂದ ಮುಕ್ತರಾದ ನಂತರ ಸಿಕ್ಕುವುದು ಎಂಬ ನಂಬಿಕೆಗೆ ಸಿಕ್ಕಷ್ಟೇ ಪ್ರಾಶಸ್ತ್ಯ ದೇವರೆಂಬುದು ಏನೂ ಇಲ್ಲ, ಮನುಷ್ಯನಲ್ಲಿ ಆತ್ಮವಿಲ್ಲಹೀಗಾಗಿ ಪುನರ್ಜನ್ಮ, ಸ್ವರ್ಗ, ನರಕದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಪುನರ್ಜನ್ಮವಿಲ್ಲದ ಮೇಲೆ ಕರ್ಮ ಸಿದ್ಧಾಂತಕ್ಕೆ ಕೆಲಸವಿಲ್ಲ, ಪೂರ್ವ ಜನ್ಮದ ಕರ್ಮದ ಹಂಗು ಇಲ್ಲದ ಮನುಷ್ಯ ಸರ್ವ ಸ್ವತಂತ್ರ, ಆತ ತನ್ನ ಜೀವನದ ನಾಟಕಕ್ಕೆ ತಾನೇ ಸೂತ್ರಧಾರನಾಗಬಲ್ಲ, ನಿಜವಾದ ಬದುಕು ಇರುವುದು ಇಲ್ಲಿಭುವಿಯಲ್ಲಿ ಕ್ಷಣದಲ್ಲಿ, ಹೀಗಾಗಿ ಸಾಲ ಮಾಡಿಯಾದರೂ ತುಪ್ಪವನ್ನು ತಿಂದು ಭೂಮಿಯ ಮೇಲಿನ ಬದುಕನ್ನು ಸಂತೋಷದಿಂದ ಬದುಕಬೇಕು ಎಂಬ ಚಾರ್ವಾಕ ಚಿಂತನೆಗೂ ಸಿಕ್ಕುತ್ತದೆ. ಹಿಂದೂ ಧರ್ಮದ ಮೂಲ ಆಶಯವನ್ನೇ ಪ್ರಶ್ನಿಸಿ ಜನ್ಮ ತಳೆದ ಬೌದ್ಧ, ಜೈನ ಧರ್ಮಗಳ ಚಿಂತನೆಯೂ ಹಿಂದೂ ತತ್ವ ಚಿಂತನೆಯಷ್ಟೇ ಗೌರವವನ್ನು ಪಡೆದಿವೆ. ಹಿಂದೂಗಳು ಬುದ್ಧನನ್ನು ಭಗವಂತ ಎಂದು ಒಪ್ಪಬಲ್ಲರು, ಮಹಾವೀರನನ್ನು ವಿಷ್ಣುವಿನ ಅವತಾರ ಎಂದು ಒಪ್ಪಬಲ್ಲರು. ಸಾಯಿ ಬಾಬಾರನ್ನು ಸಹ ದೇವರ ಅವತಾರ ಎಂದು ಒಪ್ಪಿಕೊಳ್ಳಲು ಸಿದ್ಧ. ಅಷ್ಟು ಸ್ವಾತಂತ್ರ್ಯ ಹಿಂದೂ ಚಿಂತನೆಯಲ್ಲಿದೆ. ಕ್ರೈಸ್ತರಲ್ಲಿ ಒಬ್ಬನನ್ನು ಸಂತ ಎಂದು ಕರೆಯುವುದಕ್ಕೇ ವ್ಯಾಟಿಕನ್‌ನ ಒಪ್ಪಿಗೆ ಬೇಕಾಗುತ್ತದೆ. ಇನ್ನು ಮುಸಲ್ಮಾನರಲ್ಲಿ ಯಾರಾದರೂ ತಾನು ಅಲ್ಲಾಹುವಿನ ಪ್ರವಾದಿ ಎಂದು ಕರೆದುಕೊಂಡರೆ ದೇಹದಿಂದ ತಲೆಯನ್ನು ಬೇರ್ಪಡಿಸಲು ಆಹ್ವಾನ ನೀಡಿದಂತೆಯೇ!

ಹೀಗಾಗಿ ಹಿಂದೂ ಚಿಂತನೆಯೆನ್ನುವುದು ಧರ್ಮದ ಯಾವ ಚೌಕಟ್ಟುಗಳಿಗೂ ಒಗ್ಗಿಕೊಳ್ಳುವುದಿಲ್ಲ. ಬಹುಶಃ ಅದಕ್ಕೇ ಪಾಶ್ಚಿಮಾತ್ಯ ವ್ಯಾಖ್ಯಾನಕಾರರಿಗೆ, ಭಾರತಕ್ಕೆ ಪ್ರವಾಸ ಬಂದ ವಿದೇಶಿ ಪಂದಿತರಿಗೆ, ದಾಳಿ ಮಾಡಿದ ಆಳರಸರ ಆಸ್ಥಾನದ ವಿದ್ವಾಂಸರಿಗೆ ಭಾರತದಲ್ಲಿನ ಧರ್ಮವನ್ನು ಗುರುತಿಸುವ ಕಷ್ಟ ಎದುರಾಯಿತು ಅನ್ನಿಸುತ್ತದೆ. ತಮ್ಮ ಧರ್ಮದ ಕಿಟಕಿಯಿಂದ ಭಾರತದಲ್ಲಿನ ನಂಬಿಕೆ, ಶ್ರದ್ಧೆಯನ್ನು ಕಾಣಲು ಪ್ರಯತ್ನಿಸಿ ವಿಫಲರಾದರು. ಎಲ್ಲರಿಗೂ ತಮಗೆ ಸೂಕ್ತವಾಗಿ ತೋಚಿದ ನಂಬಿಕೆಯನ್ನು ಇರಿಸಿಕೊಳ್ಳಲು, ಒಳ್ಳೆಯದು ಯಾವ ದಿಕ್ಕಿನಿಂದ ಬಂದರೂ ಸ್ವೀಕರಿಸಲು ಬೋಧಿಸಿ, ಸೃಷ್ಟಿಯೆಲ್ಲದರಲ್ಲೂ ದೇವರನ್ನು ಕಾಣಬಹುದು ಎಂದು ಬುದ್ಧಿ ಹೇಳುವ ಚಿಂತನೆ ಸ್ವತಂತ್ರ ವ್ಯಕ್ತಿಗಳನ್ನು ಸೃಷ್ಠಿ ಮಾಡುತ್ತದೆಯೇ ಹೊರತು ಒಗ್ಗಟ್ಟನ್ನಲ್ಲ ಎಂಬುದು ಮುಖಂಡರಿಗೆ ತೋಚಿರಬಹುದು. ಸಮಾನವಾದ ನಂಬಿಕೆ ಇಲ್ಲದೆ ಜನರು ಒಗ್ಗೂಡುವುದಿಲ್ಲ. ಜನರು ಒಗ್ಗೂಡದೆ ರಾಜಕೀಯ ಇಚ್ಛಾಶಕ್ತಿ ಸಾಧ್ಯವಾಗದು ಎಂಬುದು ಒಂದು ಹಂತದಲ್ಲಿ ಜನರಿಗೆ ಅರಿವಾಗಿರಬೇಕು. ಆಗ ಜನ ಗುಂಪು ಕಟ್ಟಿಕೊಳ್ಳಲು ಶುರುಮಾಡಿರಬೇಕು. ಆಳುವ ವರ್ಗ, ಹೋರಾಟದ ಜವಾಬ್ದಾರಿ ಹೊತ್ತವರನ್ನು ಒಂದು ಗುಂಪು, ಬುದ್ಧಿವಂತ ವರ್ಗದವರು ತಮ್ಮನ್ನೊಂದು ಗುಂಪು ಮಾಡಿಕೊಂಡು ಉಳಿದ ಸಾಮಾನ್ಯರನ್ನು ಶೋಷಿಸಲು ಶುರು ಮಾಡಿದರು. ಬೆಳವಣಿಗೆಗೂ ಧರ್ಮಕ್ಕೂ ಬಹುಶಃ ಸಂಬಂಧವಿರದು. ಇದು ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆ. ಅಧಿಕಾರವನ್ನು, ಹಿರಿಮೆಯನ್ನು, ಸಂಪತ್ತನ್ನು ತಮ್ಮ ಕುಟುಂಬದಲ್ಲೇ ಉಳಿಸಿಕೊಳ್ಳುವ ಹುನ್ನಾರದ ಭಾಗವಾಗಿ ಜಾತಿ ಪದ್ಧತಿ ಜಾರಿಗೆ ಬಂದಿತೇನೋ.


ಯಾವಾಗ ಒಂದು ವರ್ಗದ ಜನರು ತಮ್ಮದೇ ಶ್ರೇಷ್ಠವಾದ ರಕ್ತ, ತಮ್ಮ ಜನ್ಮವೇ ಉತ್ತಮವಾದದ್ದು, ತಾವು ಭಗವಂತನಿಗೆ ಸಮೀಪದವರು, ತಮ್ಮ ಸಂಸ್ಕೃತಿ ಬಹುಬೆಲೆಯುಳ್ಳದ್ದು, ತಮ್ಮ ಆಚಾರವಿಚಾರಗಳೇ ಸರ್ವಮಾನ್ಯವಾದದ್ದು, ತಾವು ಪೂಜಿಸುವ ದೇವರೇ ಸರ್ವಶಕ್ತ, ತಮ್ಮ ಗ್ರಂಥಗಳೇ ಅಂತಿಮ ಎಂದು ಸಾಧಿಸಲು ಶುರುಮಾಡಿದರೋ ಆಗಲೇ ಬಹುಶಃ ಹಿಂದೂ ಚಿಂತನೆಗೆ ಧರ್ಮದ ಚೌಕಟ್ಟು ಸಿಕ್ಕಿದ್ದು. ಆಗಲೇ ಭಾರತದ ನೆಲದ ಚಿಂತನೆಗೂ, ಜಗತ್ತಿನ ಇತರ ಧರ್ಮಗಳ ಸ್ವರೂಪಕ್ಕೂ ಇದ್ದ ವ್ಯತ್ಯಾಸ ಮರೆಸಲು ಸಾಧ್ಯವಾದದ್ದು. ತನ್ನ ದೇವರನ್ನು ಪೂಜಿಸು ಎಂದು ಹೇಳುವ ಮುಸಲ್ಮಾನ, ಕ್ರೈಸ್ತರ ಎದುರು ಇಲ್ಲ ನಮ್ಮ ದೇವರೇ ಶ್ರೇಷ್ಠ’ ಎಂದು ವಾದಿಸುವ ವರ್ಗ ಹುಟ್ಟಿಕೊಂಡಾಗಲೇ ಭಾರತವನ್ನು ಪ್ರವೇಶಿಸಿದ ಸೆಮೆಟಿಕ್ ಧರ್ಮಗಳಿಗೆ ಒಬ್ಬ ಪ್ರಬಲ ಪ್ರತಿಸ್ಪರ್ಧಿ ಸಿಕ್ಕಹಾಗಾಯಿತು ಅನ್ನಿಸುತ್ತದೆ. ವೈದಿಕ ಪರಂಪರೆಯು ಇತರ ಧರ್ಮಗಳ ವ್ಯಾಖ್ಯಾನದ ಚೌಕಟ್ಟಿನೊಳಕ್ಕೆ ಭಾರತದ ನೆಲದ ಚಿಂತನೆಯನ್ನು ಹೊಂದಿಸುವ ಪ್ರಯಾಸ ಪಟ್ಟಿತು ಅನ್ನಿಸುತ್ತದೆ. ಕೆಲವೇ ಮಂದಿಯ ಪರಂಪರೆ, ಸಂಸ್ಕೃತಿಯನ್ನು, ಶ್ರದ್ಧೆಯನ್ನು ಎಲ್ಲರ ಮೇಲೆ ಹೇರುವ ಬಹುದೊಡ್ಡ ಯೋಜನೆ ಜಾರಿಯಾಯಿತೆನ್ನಿಸುತ್ತದೆ. ಆಗಲೇ ಧರ್ಮದ ಜಟಿಲತೆ ಶುರುವಾದದ್ದು. ತಮ್ಮದ್ಯಾವ ಧರ್ಮ ಎಂಬ ಯೋಚನೆಯ ಗೊಡವೆಗೇ ಹೋಗದೆ ಒಂದು ಸಂಸ್ಕೃತಿಯನ್ನು ಪಾಲಿಸುತ್ತಾ ಬಂದ ಭಾರತದ ಬಹುಸಂಖ್ಯಾತ ವರ್ಗಗಳಲ್ಲಿ ತಮ್ಮದು ಒಂದು ಧರ್ಮವಿದೆ ಎಂಬ ತಿಳಿವಳಿಕೆಯ ಆವಶ್ಯಕತೆ ಬಂದದ್ದು ತಮಗಿಂತ ತೀರಾ ವಿಭಿನ್ನವಾದ ಶ್ರದ್ಧೆ, ನಂಬಿಕೆಗಳನ್ನಿರಿಸಿಕೊಂಡ ಧರ್ಮೀಯರೊಂದಿಗೆ ಬೆರೆತಾಗ ಅನ್ನಿಸುತ್ತದೆ.


ಸತ್ಯ ಒಂದೇ ಆದರೆ ಅದನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಗ್ರಹಿಸುತ್ತಾರೆ’ನಾವು ಭಾವಿಸಿದ ಹಾಗೆ ನಮ್ಮ ದೇವರು’ ಎಂಬ ನಂಬಿಕೆಯನ್ನು ಇಟ್ಟುಕೊಂಡ ಭಾರತೀಯನಿಗೆ ಕ್ರೈಸ್ತನನ್ನು ದೇವರೆಂದು ಒಪ್ಪಲು ಕಷ್ಟವಾಗದು, ಬೈಬಲನ್ನು ದೇವರವಾಣಿಯೆಂದು ನಂಬಲು ಅಸಾಧ್ಯವಲ್ಲ, ಅಲ್ಲಾಹುವಿನ ಕೃಪೆಗೆ ಪಾತ್ರರಾಗಬೇಕು ಎಂದೆನಿಸದಿರಲು ಯಾವ ಕಾರಣವೂ ಇಲ್ಲ, ಕೊರಾನ್‌ ಪಠಣ ಮಾಡುವುದಕ್ಕೆ ಸರ್ವಥಾ ತೊಂದರೆ ಇರುವುದಿಲ್ಲ. ಇವೆಲ್ಲವೂ ಭಗವಂತನನ್ನು ಸೇರುವ ವಿಭಿನ್ನ ಮಾರ್ಗಗಳು ಎಂಬ ಅರಿವಿರುವವ ಎಂದಿಗೂ ಧರ್ಮಗಳೊಂದಿಗೆ ಜಿದ್ದಿಗೆ ಬೀಳುವುದಿಲ್ಲ. ತನ್ನದೇ ಶ್ರೇಷ್ಠ ಎಂದು ಸಾಧಿಸಲು ತೊಡಗುವುದಿಲ್ಲ. ಹೀಗಾಗಿ ಭಾರತೀಯನಿಗೆ ಕ್ರೈಸ್ತನಾಗಲು, ಮುಸಲ್ಮಾನನಾಗಲು, ಬೌದ್ಧನಾಗಲು, ಜೈನನಾಗಲು ಯಾವ ಅಡ್ಡಿಯೂ ಇಲ್ಲ. ಏಕೆಂದರೆ ಆತ ಎಲ್ಲಾ ಧರ್ಮಗಳ ಮೂಲವೂ ಒಂದೇ ಎಂದು ತಿಳಿಯಬಲ್ಲವ. ಆದರೆ ವೈದಿಕ ಪರಂಪರೆಯನ್ನು ಹುಟ್ಟುಹಾಕಿ ಭಾರತೀಯ ನೆಲದ ಚಿಂತನೆಯನ್ನು ಉಳಿದ ಧರ್ಮಗಳ ರೂಪಕ್ಕೆ ಮಾರ್ಪಾಡು ಮಾಡುವಲ್ಲಿ ತಲ್ಲೀನರಾದವರಿಗೆ ಕ್ರೈಸ್ತನನ್ನು, ಅಲ್ಲಾಹುವನ್ನು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಅಷ್ಟೇ ಏಕೆ, ವಿಷ್ಣುವನ್ನು ಪೂಜಿಸುವವರಿಗೆ ಶಿವನೇ ವರ್ಜ್ಯನಾಗಿ ಬಿಟ್ಟ!


ದಿಶೆಯಲ್ಲಿ ಆಲೋಚಿಸಿದಾಗ ಭಾರತದ ನೆಲದ ಚಿಂತನೆಯನ್ನು ನಾಶ ಮಾಡುವಲ್ಲಿ ಎರಡು ಶಕ್ತಿಗಳು ಮುಖ್ಯವಾಗಿ ಕೆಲಸ ಮಾಡಿದವು ಎಂಬುದು ಸ್ಪಷ್ಟವಾಗುತ್ತದೆ. ಒಂದು, ನೆಲದವರೇ (ಅದೇನೋ ವೈದಿಕರು ಆರ್ಯರು, ಅವರು ಆಕ್ರಮಣಕಾರರು ಎಂದೆಲ್ಲಾ ಇತಿಹಾಸದಲ್ಲಿ ಹೇಳಿದ್ದ ನೆನಪುಅದರ ಬಗ್ಗೆ ತಿಳಿದಿಲ್ಲವಾದ್ದರಿಂದ ನನ್ನ ಗ್ರಹಿಕೆಯನ್ನು ಮಾತ್ರ ಇಲ್ಲಿ ದಾಖಲಿಸುವೆ) ಆದ ಕೆಲವರು ನೆಲದ ಚಿಂತನೆಗೆ ಧರ್ಮದ ಚೌಕಟ್ಟು ತೊಡಿಸಲು ಹೋಗಿ ಚಿಂತನೆಯನ್ನು ನಾಶ ಮಾಡಲು ಶುರುಮಾಡಿದ್ದು. ಸೃಷ್ಟಿಯಲ್ಲಿನ ಪ್ರತಿಯೊಂದು ಜೀವಿಯೂ ದೇವರ ಸೃಷ್ಟಿ, ಅಣುಅಣುವಿನಲ್ಲೂ ದೇವರ ಅಂಶವೇ ಇರುವುದು ಎಂದು ನಂಬಿದವ ಎಂದಿಗೂ ಬ್ರಾಹಣ ಕುಲದಲ್ಲಿ ಹುಟ್ಟಿದವ ಶ್ರೇಷ್ಠ, ಆತ ಅಸ್ಪೃಶ್ಯರ ನೆರಳೂ ತಾಕದಂತಿರಬೇಕು. ಅಸ್ಪೃಶ್ಯರು, ಅಸಹಾಯಕರು ತಮ್ಮ ಕರ್ಮಫಲದಿಂದಾಗಿ ಜನ್ಮ ಪಡೆದಿದ್ದಾರೆ ಎಂದು ಯೋಚಿಸಲಾರ. ಚಿಂತನೆಯನ್ನು ಜಾರಿಗೆ ತಂದ ವರ್ಗ ಸ್ಪಷ್ಟವಾಗಿ ಭಾರತೀಯತೆಯನ್ನು ನಾಶ ಮಾಡಲು ಶುರುಮಾಡಿತು.


ಇನ್ನುಳಿದಂತೆ ಭಾರತದ ನೆಲವನ್ನು ಆಕ್ರಮಿಸಿದ ಇತರ ಧಾರ್ಮಿಕರು ಭಾರತೀಯತೆಯನ್ನು ನಾಶ ಮಾಡುವಲ್ಲಿ ತಮ್ಮ ಕೈಲಾದ ಪ್ರಯತ್ನ ಮಾಡಿದರು. ಅಲ್ಲಾಹುವನ್ನು ದೇವರೆಂದು ಒಪ್ಪಿದ, ಕುರಾನ್‌ ದೇವರ ಸಂದೇಶ ಎಂದು ನಂಬಲು ಸಿದ್ಧರಿರುವ ಭಾರತದ ನೆಲದ ಜನರನ್ನು ಅವರು ಮುಸಲ್ಮಾನರು ಎಂದು ಒಪ್ಪಿಕೊಳ್ಳಲು ಯಾವ ತೊಂದರೆಯೂ ಇರಲಿಲ್ಲ. ಆದರೆ ಸಮಸ್ಯೆಯಿದ್ದದ್ದು ಇಸ್ಲಾಂ, ಕ್ರೈಸ್ತ ಧರ್ಮದ ಚಿಂತನೆಯಲ್ಲಿ. ಅಲ್ಲಾಹುವನ್ನು ದೇವರು ಎಂದು ಮಾತ್ರವಲ್ಲ, ಅಲ್ಲಾಹು ಉಳಿದು ಉಳಿದ ದೇವರುಗಳೆಲ್ಲಾ ಸುಳ್ಳು ಎಂದು ನಂಬಬೇಕು. ಕ್ರೈಸ್ತನೊಬ್ಬನೇ ದೇವರ ಮಗ (only begotten son of God), ಬೇರಾರೂ ದೈವತ್ವ ಪಡೆದಿರಲು ಸಾಧ್ಯವಿಲ್ಲ, ಮೂರ್ತಿ ಪೂಜೆ ಧರ್ಮ ಬಾಹಿರ ಎಂದೆಲ್ಲಾ ನಂಬಿದವ ಮಾತ್ರ ಧರ್ಮೀಯನಾಗಲು ಸಾಧ್ಯ ಎಂಬುದು ಇಸ್ಲಾಂ ಕ್ರೈಸ್ತ ಧರ್ಮದ ನೀತಿ. ಹೀಗಾಗಿ ಇಲ್ಲಿನ ಜನರು ಕೇವಲ ತಮ್ಮ ಶ್ರದ್ಧೆಯನ್ನು ಗೌರವಿಸಿದರೆ ಸಾಲದು ಅವರು ತಮ್ಮ ಹಿಂದಿನ ಚಿಂತನೆಯನ್ನೆಲ್ಲಾ ಸುಳ್ಳು ಎಂದು ಒಪ್ಪಿಕೊಳ್ಳಬೇಕು ಎಂಬ ಜಿದ್ದಿಗೆ ಬಿದ್ದವು ಧರ್ಮಗಳು. ಆಗಲೇ ನಿಂದನೆಗಳು ಶುರುವಾದದ್ದು.


ಗಾಂಧೀಜಿ ಒಮ್ಮೆ ತಾನು ಒಬ್ಬ ಹಿಂದೂ, ಮುಸಲ್ಮಾನ ಹಾಗೂ ಕ್ರೈಸ್ತ ಎಂದು ಹೇಳಿಕೊಳ್ಳಲು ಬಯಸುತ್ತೇನೆ ಎಂದಾಗ ಜಿನ್ನಾ(?) ಅನ್ನಿಸುತ್ತದೆ, ‘ನೀವು ಒಬ್ಬ ಹಿಂದೂ ಆಗಿರುವುದಕ್ಕೆ ಹಾಗೆ ಹೇಳಲು ಸಾಧ್ಯ’ ಎಂದಿದ್ದರು. ಇಲ್ಲಿ ಹಿಂದೂ ಎಂದರೆ ಏನು ಎಂಬುದು ತೀರಾ ಸರಳವಾಗಿ ಅರ್ಥ ಮಾಡಿಕೊಳ್ಳಬಹುದು. ಬ್ರಾಹ್ಮಣನಿಗೆ ಜೀಸನ್‌ನನ್ನು ಪೂಜಿಸಲು ಸಾಧ್ಯವಾಗದಿದ್ದರೆ, ಆತನ ದೈವಿಕತೆಯನ್ನು ಒಪ್ಪಲು ಸಾಧ್ಯವಾಗದಿದ್ದರೆ ಆತ ಹಿಂದೂ ಅಲ್ಲ. ಹೀಗಾಗಿ ವೈದಿಕತೆಯನ್ನು ಬೆಂಬಲಿಸುವವರ್ಯಾರೂ ಹಿಂದುಗಳಾಗುವುದಿಲ್ಲ! ಕ್ರಿಸ್ತನನ್ನು ನಂಬಿಯೂ, ಅಲ್ಲಾಹುವಿಗೆ ನಮಿಸಿಯೂ, ಖುರಾನ್ ಪಠಣ ಮಾಡಿಯೂ ಒಬ್ಬ ಹಿಂದೂವಾಗಿ ಉಳಿಯಬಹುದು ಆದರೆ ಕ್ರಿಸ್ತನನ್ನು ಪೂಜಿಸಿದವ ಮುಸಲ್ಮಾನನಾಗಿ ಉಳಿಯಲು ಸಾಧ್ಯವೇ? ಖುರಾನ್ ಅಪ್ಪಿಕೊಂಡವ, ವಿಷ್ಣುವನ್ನು ಪೂಜಿಸಿದವ ಕ್ರೈಸ್ತನಾಗಿರಲು ಧರ್ಮ ಒಪ್ಪಿಕೊಳ್ಳುತ್ತದೆಯೇ? ಮಸೀದಿಗೆ ಹೋದವನನ್ನು, ತಾವು ಕೀಳು ಜಾತಿ ಎಂದು ನಂಬಿರುವವರೊಂದಿಗೆ ಬೆರೆತವರನ್ನು ತಮ್ಮ ಧರ್ಮೀಯ ಎಂದು ಒಪ್ಪಲು ವೈದಿಕರಿಗೆ ಸಾಧ್ಯವಾಗುತ್ತದೆಯೇ? ಖಂಡಿತಾ ಇಲ್ಲ. ಗುಡ್ಡ ಗಾಡುಗಳಲ್ಲಿ, ದಟ್ಟ ಅರಣ್ಯಗಳಲ್ಲಿ, ಮರಳುಗಾಡಿನಲ್ಲಿ ವಾಸಿಸುತ್ತಿರುವ, ತಮ್ಮ ಧರ್ಮ ಯಾವುದು ಎಂದು ತಲೆಕೆಡಿಸಿಕೊಳ್ಳದೆ ನೆಲದ ಸಂಸ್ಕೃತಿಯನ್ನು ಅಳವಡಿಸಿಕೊಂಡು ಬದುಕುವವರನ್ನು ಕ್ರೈಸ್ತರನ್ನಾಗಿಸುವುದಾಗಲೀ, ಮುಸಲ್ಮಾನನನ್ನಾಗಿಸುವುದಾಗಲೀ, ನಮ್ಮ ನೇತಾರರು ಹೇಳುವ ಹಿಂದೂ’ವನ್ನಾಗಿಸುವುದಾಗಲೀ ನೆಲದ ಚಿಂತನೆಯನ್ನು, ಸಂಸ್ಕಾರವನ್ನು ನಾಶ ಮಾಡಿದಂತೆಯೇ. ಅದು ಏಕರೂಪಿ ಸಂಸ್ಕೃತಿಯನ್ನು ಹೇರಿದಂತೆಯೇ.


ಇದೇ ಜಾಡಿನಲ್ಲಿ ಮುಂದುವರೆದು ಯೋಚಿಸಿದರೆ ಯಾವ ಅರಿವೂ ಇಲ್ಲದೆ ಭೂಮಿಗಿಳಿಯುವ ಮಕ್ಕಳಿಗೆ ತಿಳುವಳಿಕೆ ಬರುವ ಮುನ್ನವೇ, ತನ್ನ ಸ್ವಂತ ಆಲೋಚನೆಯನ್ನು ಬೆಳೆಸಿಕೊಳ್ಳುವ ಮುನ್ನವೇ ಈತ ಹಿಂದೂ, ಮುಸಲ್ಮಾನ, ಕ್ರೈಸ್ತ ಎಂದು ಕರೆಯುವುದು ಕೂಡ ಹೇರಿಕೆಯೇ ಆಗುತ್ತದಲ್ಲವೇ?