ಸ್ವತಂತ್ರ ಆಯ್ಕೆಯ ಭ್ರಮೆಯಲ್ಲಿರುವ ಗೀತಾಳ ಗೆಲುವು ಎಲ್ಲಿದೆ?

(ಸಂವಾದ ಡಾಟ್ ಕಾಮ್ ಆಯೋಜಿಸಿದ್ದ ಕೃಷ್ಣನ್ ಲವ್ ಸ್ಟೋರಿ ಸಿನೆಮಾ ಕುರಿತ ವಿಮರ್ಶೆ ಸ್ಪರ್ಧೆಗೆ ಕಳುಹಿಸಿದ್ದ ಬರಹ )


 

ರುಪಾಯಿ ನಾಣ್ಯ ಮೇಲಕ್ಕೆ ಚಿಮ್ಮಲ್ಪಡುತ್ತದೆ. ಕ್ರಿಕೆಟ್ ಆಟ ಶುರುವಾಗುತ್ತದೆ. ಬೈಕುಗಳಲ್ಲಿ ಬಂದ ಸಣ್ಣ ಬಟ್ಟೆ ವ್ಯಾಪಾರ ಮಾಡುವ ಹುಡುಗರ ತಂಡಕ್ಕೆ ಕೃಷ್ಣ ನಾಯಕ. ಕಾರುಗಳಲ್ಲಿ ಬರುವ ಶ್ರೀಮಂತ ಹುಡುಗರ ತಂಡಕ್ಕೆ ನರೇಂದ್ರ ನಾಯಕ. ಇವರಿಬ್ಬರು ಇದೇ ಮೊದಲ ಸಲ ಕ್ರಿಕೆಟ್ ಆಡುತ್ತಿರುವುದೇನಲ್ಲ. ಇವರು ಕ್ರಿಕೆಟ್ ಆಡುವುದೂ ಇಂಥದ್ದೇ ಎನ್ನುವ ಕಾರಣಕ್ಕೆ ಅಲ್ಲ. ಕೆಲವೊಮ್ಮೆ ದುಡ್ಡಿಗಾಗಿ, ಕ್ರೇಜಿಗಾಗಿ, ಟೈಂಪಾಸಿಗಾಗಿ; ಇನ್ನು ಕೆಲವೊಮ್ಮೆ ಸೇಡಿಗಾಗಿ, ಪ್ರೆಸ್ಟೀಜಿಗಾಗಿ. ಇವರಿಬ್ಬರ ನಡುವೆ ದೋಸ್ತಿ ಎನ್ನುವುದು ಇರುವುದು ಬೆಟ್ಟಿಂಗ್ ಕಟ್ಟಿ ಕ್ರಿಕೆಟ್ ಆಡುವುದು, ಆಟದಲ್ಲಿ ಗೆಲ್ಲುವುದಕ್ಕೆ ಹೊಡೆದಾಟ, ಮೋಸದಿಂದ ಹಿಡಿದು ಎಲ್ಲಾ ಪ್ರಯತ್ನಗಳನ್ನು ಮಾಡುವುದರಲ್ಲಿ.

ಒಂದು ಆಟ ಶುರುವಾಗುತ್ತದೆ. ಇಂಡಿಯಾದಲ್ಲಿ ಗಲ್ಲಿ ಗಲ್ಲಿಗಳಲ್ಲಿ ನಡೆಯುವ ಬೆಟ್ಟಿಂಗ್ ಕ್ರಿಕೆಟ್ ನಂತೆಯೇ ಆಟ. ಕೃಷ್ಣ ಸಿಕ್ಸರುಗಳನ್ನು ಚಚ್ಚುತ್ತಾನೆ, ನರೇಂದ್ರ ಬೌಲ್ ಮಾಡುತ್ತಾನೆ. ಕೃಷ್ಣ ಬೌಲ್ ಮಾಡುತ್ತಾನೆ, ನರೇಂದ್ರ ರನ್ ಗಳಿಸುತ್ತಾನೆ. ಆ ಒಂದು ಆಟದಲ್ಲಿ ಕೃಷ್ಣ ಗೆಲ್ಲುತ್ತಾನೆ. ಎರಡೂ ತಂಡಗಳು ಹೊಡೆದಾಟಕ್ಕಿಳಿದು ಗುದ್ದಿಕೊಂಡು, ಚಚ್ಚಿಕೊಂಡು, ಒಬ್ಬರನ್ನು ಒಬ್ಬರು ನೆಲದ ಮೇಲೆ ಕೆಡವಿಕೊಂಡು ಬಡಿದಾಡುತ್ತಾರೆ. ಈ ನಡುವೆ ಇಷ್ಟು ಹಣ ಕೊಟ್ಟರೆ ತಾನು ಸೋತೆ ಎಂದು ಒಪ್ಪಿಕೊಳ್ಳುವುದಕ್ಕೆ ತಯಾರು ಎನ್ನುತ್ತಾನೆ ಕೃಷ್ಣ. ತಾನು ಗೆಲ್ಲುವುದಕ್ಕೆಂದು ಆಡಿದ ಆಟದಲ್ಲಿ ಗೆದ್ದರೂ ತಾನು ಸೋತೆ ಎಂದು ಒಪ್ಪಿಕೊಳ್ಳುವುದಕ್ಕೆ ಆತ ನೀಡುವ ಸಮರ್ಥನೆ: ಜೀವನದಲ್ಲಿ ಹೆಸರು ಮಾಡುವುದು ಮುಖ್ಯವೋ, ಬಸಿರು ಮಾಡುವುದು ಮುಖ್ಯವೋ (ಸೆನ್ಸಾರ್ ನವರ ಕೃಪೆಯಿಂದ ‘ಬಸಿರು’ ಸಿನೆಮಾದಲ್ಲಿ ಮಾಯವಾಗುತ್ತದೆ) ಎಂದು.

ಆಟವನ್ನು ಆಡಿ ಅದರಲ್ಲಿ ಗೆದ್ದು ಆ ಗೆಲುವನ್ನು ಮಾರಿಕೊಂಡು ಅದನ್ನು ತನ್ನ ಬುದ್ಧಿವಂತಿಕೆಯ, ತನ್ನ ಸಾಮರ್ಥ್ಯದ, ತನ್ನ ಸ್ಟ್ರೀಟ್ ಸ್ಮಾರ್ಟ್ ನೆಸ್ ನ ಎವಿಡೆನ್ಸ್ ಎನ್ನುವ ಹಾಗೆ ಕೃಷ್ಣ ಬೀಗುತ್ತಾ ಹೋಗುತ್ತಾನೆ. ಆಟವನ್ನು ಗೆಲ್ಲುವುದಕ್ಕೆಂದೇ ಆಡಿ ಅದರಲ್ಲಿ ಸೋತರೂ ತನ್ನ ಹಣದ ಬಲದಿಂದ ಗೆಲುವನ್ನು ದಕ್ಕಿಸಿಕೊಂಡ ಸಂತೃಪ್ತಿಯಲ್ಲಿ ನರೇಂದ್ರ ನಿರ್ಗಮಿಸುತ್ತಾನೆ. ಕೃಷ್ಣ ಹಾಗೂ ನರೇಂದ್ರನ ನಡುವೆ ನಡೆದ ಒಳ ಒಪ್ಪಂದ ಪ್ರೇಕ್ಷಕರಿಗೆ ಕಂಡು ಬಿಡುವುದರಿಂದ ಇದನ್ನು ಪ್ರೇಕ್ಷಕನು ಅಷ್ಟು ಗಂಭೀರವಾಗಿ ಪರಿಗಣಿಸುವುದಿಲ್ಲ.

ಆಟವೆಂದರೆ ಎರಡು ತಂಡಗಳು ಸಮಾನವಾದ ವೇದಿಕೆಯಲ್ಲಿ ತಮ್ಮ ಕೌಶಲ್ಯ, ಶಕ್ತಿಯನ್ನು ಪ್ರದರ್ಶಿಸಿ ಸಮರ್ಥವಾದ ತಂಡ ಗೆಲುವು ಸಾಧಿಸುವುದು. ಒಬ್ಬನು ಗೆದ್ದ ಎಂದರೆ ಮತ್ತೊಬ್ಬನು ಸೋತ ಎನ್ನುವುದು ಆಟದ ನಿಯಮ. ಇದನ್ನು ಒಪ್ಪಿಕೊಂಡು ಆಡಿದರೆ ಮಾತ್ರ ಆಟದಲ್ಲಿ ಆಸಕ್ತಿ ಇರುತ್ತದೆ, ಅದು ಆಟ ಎಂದು ಕರೆಸಿಕೊಳ್ಳುತ್ತದೆ.

ಆದರೆ ಈ ಘಟನೆಯಲ್ಲಿ ಕೃಷ್ಣ ಹಾಗೂ ನರೇಂದ್ರ ಆಟದ ದಿಕ್ಕು ದಿಸೆಯನ್ನೇ ಬದಲಾಯಿಸಿಬಿಡುತ್ತಾರೆ. ಒಂದೇ ಮೈದಾನದಲ್ಲಿ ಒಂದೇ ಆಟವನ್ನು ಆಡಿದರೂ ಇಬ್ಬರೂ ಗೆಲ್ಲಬಹುದಾದ ಮಾರ್ಗವನ್ನು ಹುಡುಕಿಕೊಳ್ಳುತ್ತಾರೆ. ಕೃಷ್ಣ ‘ಬಸಿರ’ನ್ನು ಮಾಡಿದ ತೃಪ್ತಿಯಲ್ಲಿ ಗೆಲುವು ಕಂಡರೆ ನರೇಂದ್ರ ಹೆಸರು ಗಳಿಸಿ ಗೆದ್ದೆ ಎಂದುಕೊಳ್ಳುತ್ತಾನೆ. ನಿಜದ ಕ್ರಿಕೆಟ್ ಆಟದಲ್ಲಿನ ಸೋಲು ಗೆಲುವು ಅವರ ದೃಷ್ಟಿಯಲ್ಲಿ ಸೋಲು ಗೆಲುವು ಅಲ್ಲವೇ ಅಲ್ಲ. ಇಬ್ಬರಲ್ಲಿ ಯಾರು ಕ್ರಿಕೆಟ್ನಲ್ಲಿ ಗೆದ್ದಿದ್ದರೂ ಅವರು ಇಬ್ಬರೂ ಗೆಲ್ಲಬಹುದಾದ ಒಪ್ಪಂದಕ್ಕೆ ಬಂದು ಬಿಡುತ್ತಿದ್ದರು. ಅಂದರೆ ಮಧ್ಯಮ ವರ್ಗದ ಕೃಷ್ಣ ಹಾಗೂ ಶ್ರೀಮಂತ ವರ್ಗದ ನರೇಂದ್ರ ಇಬ್ಬರೂ ಗೆಲುವಿನ ಸಂಭ್ರಮವನ್ನು, ಸಂತೃಪ್ತಿಯನ್ನು ಪಡೆಯುವುದಕ್ಕೆ ಕ್ರಿಕೆಟ್ ಆಟವನ್ನು ನೆಪವಾಗಿಸಿಕೊಂಡರು.

***

ಕೃಷ್ಣ ಹಾಗೂ ನರೇಂದ್ರ ಇನ್ನೊಂದು ಸಂದರ್ಭದಲ್ಲಿ ಮುಖಾಮುಖಿಯಾಗುತ್ತಾರೆ. ಇಬ್ಬರೂ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ದುಡಿಯುವ ಕೆಳವರ್ಗದ ತಾಯಿಯ ಮಗಳಾದ  ಗೀತಾ ಎನ್ನುವ ಹುಡುಗಿಯನ್ನು ಪ್ರೀತಿಸಲು ಶುರು ಮಾಡಿರುತ್ತಾರೆ. ಈ ಬಾರಿಯೂ ಇಬ್ಬರೂ ಬೆಟ್ ಕಟ್ಟುತ್ತಾರೆ. ಕ್ರಿಕೆಟ್ ಬದಲಾಗಿ ಇಲ್ಲಿ ಬೆಟ್ಟಿಂಗಿಗೆ ಗೀತಾ ಬಳಸಲ್ಪಡುತ್ತಾಳೆ. ಬೆಟ್ಟಿನಲ್ಲಿ ಗೆದ್ದವರು ಗೀತಾಳನ್ನು ಮದುವೆಯಾಗಬಹುದು (‘ಹೊಂದಬಹುದು’ ಎನ್ನುವುದು ಸೂಕ್ತವೇನೋ!), ಗೀತಾ ತಾನಾಗಿ ಯಾರ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾಳೋ ಅವರು ಗೆದ್ದಂತೆ ಎನ್ನುವ ಒಪ್ಪಂದಕ್ಕೆ ಬರುತ್ತಾರೆ.

ಅಲ್ಲಿಂದ ಇನ್ನೊಂದು ಆಟ ಶುರುವಾಗುತ್ತದೆ.

ನರೇಂದ್ರ ತನ್ನ ಹಣ, ತನ್ನಪ್ಪನ ಹೊಟೇಲು, ಕಾರು, ದುಬಾರಿ ಮೊಬೈಲುಗಳಿಂದ ತನ್ನ ಕಡೆಯ ಆಟವನ್ನು ಆಡುತ್ತಾನೆ. ಇತ್ತ ಕೃಷ್ಣ ತನ್ನ ಮುಗ್ಧತೆ, ತನ್ನ ಪ್ರೀತಿಯ ವೈಶಾಲ್ಯಗಳನ್ನು ಪಣಕ್ಕೊಡ್ಡುತ್ತಾನೆ

ಗೀತಾಳ ತಾಯಿ ಆಸ್ಪತ್ರೆ ಸೇರಿಕೊಂಡಾಗ ಹೂವಿನ ಬೊಕೆ, ‘ಗೆಟ್ ವೆಲ್ ಸೂನ್ ಆಂಟಿ’ ಎನ್ನುವ ಕಾಳಜಿ ತುಂಬಿದ ಶುಭಾಶಯ,  ಆಸ್ಪತ್ರೆಯಲ್ಲಿ ಉತ್ತಮ ವ್ಯವಸ್ಥೆಗಾಗಿ  ಬಳಸಬಹುದಾದ ತನ್ನ ಅಧಿಕಾರ ಇವುಗಳನ್ನು ಪರೀಕ್ಷೆಗೊಡ್ಡುತ್ತಾನೆ ನರೇಂದ್ರ. ಇತ್ತ ಕೃಷ್ಣ ಆಕೆಯೊಂದಿಗೇ ಇದ್ದು ಭದ್ರತೆಯ ಭಾವ ದೊರಕಿಸಿಕೊಡುತ್ತಾನೆ. ಆಕೆ ಅಳುತ್ತ ಒರಗಬಹುದಾದ ಹೆಗಲಾಗುತ್ತಾದೆ.

ನರೇಂದ್ರ ತನ್ನಪ್ಪನ ಹೊಟೇಲಿಗೆ ಬಂದ ಗೀತಾಳಿಗೆ ಬಿಲ್ ಮಾಫಿ ಮಾಡಲು ನಿರಾಕರಿಸಿ ಆಕೆಯ ಸ್ವಾಭಿಮಾನವನ್ನು ಗೌರವಿಸುತ್ತಾನೆ. ಆಕೆಗೆ ಇಷ್ಟವಾಗುವುದಿಲ್ಲ ಎಂದು ತನ್ನನ್ನು ತಾನು ತಿದ್ದಿಕೊಂಡು ವರ್ತಿಸುತ್ತಾನೆ. ಇತ್ತ ಕೃಷ್ಣ ತನ್ನ ಮುಗ್ಧತೆ, ತನ್ನ ಪ್ರೀತಿಯ ವೈಶಾಲ್ಯಗಳನ್ನು ಪಣಕ್ಕೊಡ್ಡುತ್ತಾನೆ. ಬೀದಿ ಮಕ್ಕಳಿಗೆ ಕಾಫಿ ಡೇನಲ್ಲಿ ಐಸ್ ಕ್ರೀಮು ಕೊಡಿಸುತ್ತಾನೆ, ರೌಡಿಗಳನ್ನು ಚಚ್ಚಿ ಗೀತಾಳ ಮಾನ ರಕ್ಷಣೆ ಮಾಡುತ್ತಾನೆ, ಗೀತಾಳ ತಾಯಿಯ ಎದುರು ಸಭ್ಯ ಹುಡುಗನೆನ್ನಿಸಿಕೊಳ್ಳುತ್ತಾನೆ. ಗೀತಾಳ ತಾಯಿ ಆಸ್ಪತ್ರೆ ಸೇರಿದಾಗ, ಆಕೆಯನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸಿ ಬರುವಾಗ ಆಕೆಯ ಓದು, ಭವಿಷ್ಯ, ಸ್ವಾಭಿಮಾನದ ಬಗ್ಗೆ ತನಗಿರುವ ಕಾಳಜಿಯನ್ನು ವ್ಯಕ್ತ ಪಡಿಸುತ್ತಾನೆ.

ಆಟವು ಕುತೂಹಲದ ಘಟ್ಟವನ್ನು ತಲುಪಿಕೊಳ್ಳುತ್ತದೆ.

ಕೃಷ್ಣನು ಗೀತಾಳಿಗೆ ಪ್ರಪೋಸ್ ಮಾಡಿಯೇ ಬಿಡುತ್ತಾನೆ. ಆಕೆ ಆತನನ್ನು ಕಣ್ಣಲ್ಲಿ ದಿಟ್ಟಿಸುತ್ತಾ ತಾನು ಪ್ರೀತಿ ಗೀತಿಯಲ್ಲಿ ನಂಬಿಕೆಯಿಟ್ಟಿಲ್ಲ. ತನ್ನ ಓದು ಮುಗಿಯುವವರೆಗೆ ಯಾವ ಅಪ್ಲಿಕೇಶನ್ನನ್ನೂ ಒಪ್ಪುವುದಿಲ್ಲ ಎನ್ನುತ್ತಾಳೆ.

ತನ್ನ ಅಪ್ಲಿಕೇಶನ್ ತಿರಸ್ಕರಿಸಲ್ಪಟ್ಟಿತು ಎಂದಾಗ ಕೃಷ್ಣ ಕುಸಿದು ಹೋಗುವುದಿಲ್ಲ. ಪ್ರೀತಿ ಕೈಗೆ ಸಿಕ್ಕಲಿಲ್ಲ ಎಂಬ ನಿರಾಶೆಯಲ್ಲಿ ಕೊರಗುವುದಿಲ್ಲ. ಬದಲಾಗಿ ತನ್ನ ಗೆಳೆಯರಿಗೆ ಎಣ್ಣೆ ಪಾರ್ಟಿ ಕೊಡಿಸುತ್ತಾನೆ. ಸಂಭ್ರಮದಿಂದ ಇರುತ್ತಾನೆ. ಈ ಸಂಭ್ರಮಕ್ಕೆ ಗೆಳೆಯರು ಕಾರಣ ಕೇಳುತ್ತಾರೆ, ಆತ ಹೇಳುತ್ತಾನೆ, ಗೀತಾ ತನ್ನೊಬ್ಬಳ ಅಪ್ಲಿಕೇಶನ್ ತಿರಸ್ಕರಿಸಲಿಲ್ಲ, ಯಾರ ಅಪ್ಲಿಕೇಶನ್ನೂ ಒಪ್ಪಿಕೊಳ್ಳುವುದಿಲ್ಲ ಎಂದಳು ಎನ್ನುತ್ತಾನೆ. ಇಲ್ಲಿ ನಾನೊಬ್ಬನೇ ಸೋತದ್ದಲ್ಲ, ನರೇಂದ್ರನೂ ಸೋತ ಎಂದು ತಿಳಿಯುವುದರಲ್ಲಿ ಕೃಷ್ಣನಿಗೆ ಸಂಭ್ರಮವಿದೆ. ಕ್ರಿಕೆಟ್ ನಲ್ಲಿ ಇಬ್ಬರೂ ಗೆಲ್ಲಬಹುದಾದ ಒಪ್ಪಂದ ಮಾಡಿಕೊಳ್ಳುವುದಕ್ಕೂ ಇದೂ ಮನಸ್ಥಿತಿ ಕಾರಣ.

***

ಕೃಷ್ಣ ಹಾಗೂ ನರೇಂದ್ರರ ಮಧ್ಯೆ ತಾನು ಬೆಟ್ಟಿಂಗ್ ಕ್ರಿಕೆಟ್ ಆಗಿದ್ದೇನೆ. ತನಗೆ ತೋರಿಸಲ್ಪಡುತ್ತಿರುವ ಪ್ರೀತಿ, ಕಾಳಜಿಗಳು ಅವರಿಬ್ಬರ ಆಟದ ಮೈದಾನವಾಗಿದೆ ಎನ್ನುವುದರ ಅರಿವಿಲ್ಲದ ಗೀತಾ ಇಡೀ ವ್ಯವಹಾರ ತನ್ನ ನಿಯಂತ್ರಣದಲ್ಲೇ ಇದೆ ಎಂದು ಭಾವಿಸುತ್ತಾಳೆ.

ವ್ಯಕ್ತಿಗತವಾಗಿ ತುಂಬ ಸ್ವಾಭಿಮಾನಿಯಾದ ಗೀತಾ ತಾನು ಸ್ವತಂತ್ರವಾಗಿ ಬದುಕನ್ನು ಕಟ್ಟಿಕೊಳ್ಳಬಲ್ಲೆ ಎಂದುಕೊಂಡಿರುತ್ತಾಳೆ. ಆಕೆಗೆ ತನ್ನ ವಾಸ್ತವದ ಅರಿವಿದೆ. ತಾನು ಬಡತನದಲ್ಲಿ ಸಿಲುಕಿಕೊಂಡಿದ್ದೇನೆ ಎಂಬ ಅರಿವು ಆಕೆಗಿದೆ. ಆದರೆ ಆಕೆಯ ತಾಯಿಯ ಹಾಗೆ ಅವಳು ಬಡವಳು ಅಲ್ಲ. ಬಡತನವನ್ನು ಒಪ್ಪಿಕೊಂಡವಳು ಅಲ್ಲ. ಕೆಳವರ್ಗದ ಸದಸ್ಯಳು ಅಲ್ಲ. ತಾನು ಶಾಪಗ್ರಸ್ತ ಅಪ್ಸರೆ, ತನಗೆ ಒಂದು ದಿನ ಶಾಪದಿಂದ ವಿಮುಕ್ತಿ ಸಿಕ್ಕುತ್ತದೆ ಅಲ್ಲಿಯವರೆಗೆ ತಾನು ತನ್ನ ಕನಸುಗಳನ್ನು ಕೊಂದುಕೊಂಡು ಬದುಕಬೇಕು ಎಂದು ಭಾವಿಸಿಕೊಂಡಿರುತ್ತಾಳೆ. ಹೀಗಾಗಿಯೇ ಆಕೆಗೆ ಬಡತನದಲ್ಲಿ ಮನೆ ಖರ್ಚು ತೂಗಿಸಲು ಹೆಣಗಾಡುವ ತಾಯಿ ಕಾಣುವುದಿಲ್ಲ. ಕುಡುಕ, ರೌಡಿ ಅಣ್ಣನ  ಜೇಬಿನಿಂದ ಎಗರಿಸಿದ ಹಣದಿಂದ ಬೀದಿ ಮಕ್ಕಳಿಗೆ ಐಸ್ ಕ್ರೀಮ್ ಕೊಡಿಸಿ ಆ ಅನ್ಯಾಯದ ಹಣಕ್ಕೆ ನ್ಯಾಯದ ಮಾರ್ಗ ತೋರಿಸಿದೆ ಎಂದುಕೊಳ್ಳುತ್ತಾಳೆ. ಪಬ್ ಪಾರ್ಟಿಗಳಿಗೆ ಹೋಗಿ ಬರುತ್ತಾಳೆ.

ಕೆಳವರ್ಗದ ಹುಡುಗಿಯಾದರೂ ತಾನು ಅಲ್ಲಿ ಸೇರಿದವಳು, ತಾನು ಪ್ರತಿನಿಧಿಸುವುದು ಕೆಳವರ್ಗವನ್ನು, ತನ್ನ ಬದುಕು ಕೆಳವರ್ಗದ ಬದುಕೇ ಎನ್ನುವುದನ್ನು ನಿರಾಕರಿಸುತ್ತಲೇ ಇರುವ ಗೀತಾ ಕೃಷ್ಣ ಹಾಗೂ ನರೇಂದ್ರ ಇಬ್ಬರೂ ಗೆಲ್ಲುವುದಕ್ಕೆಂದು ಮಾಡಿಕೊಂಡ ಪ್ರೀತಿ ಎಂಬ ಆಟದ ದಾಳವಾಗುತ್ತಾಳೆ. ಪಾಪ ಅವಳಿಗೆ ಅದರ ಅರಿವೂ ಇರುವುದಿಲ್ಲ. ಇಡೀ ಪ್ರಕ್ರಿಯೆಯಲ್ಲಿ ಆಕೆ ಕೃಷ್ಣ ಹಾಗೂ ನರೇಂದ್ರ ಎಂಬ ಇಬ್ಬರು ಹುಡುಗರನ್ನು ತನ್ನೆದುರು ಇರುವ ಎರಡು ಆಯ್ಕೆಗಳು ಎಂದೇ ನಂಬಿಕೊಂಡಿರುತ್ತಾಳೆ. ಒಂದು ಸಂದರ್ಭದಲ್ಲಿ ಆಕೆ ತನ್ನನ್ನು ಚುಡಾಯಿಸುತ್ತಿದ್ದ ಪೋಲಿ ಹುಡುಗರಿಗೆ ಕೇಳುತ್ತಾಳೆ, “ನೀವು ಶರ್ಟು ಖರೀದಿಸುವುದಕ್ಕೆ ಹೋದಾಗ, ಇದು ಚೆನ್ನಾಗಿದೆಯೋ ಅಥವಾ ಮತ್ತೊಂದು ಚೆನ್ನಾಗಿದೆಯೋ ಎಂದು ಅಳೆದು ತೂಗಿ ಆಯ್ಕೆ ಮಾಡುವುದಿಲ್ಲವೇ? ಹಾಗೆಯೇ ನನ್ನೆದುರು ಕೃಷ್ಣ ಹಾಗೂ ನರೇಂದ್ರ ಇದ್ದರು. ನಾನು ಆಗ ಅವನನ್ನು ಆಯ್ಕೆ ಮಾಡಿಕೊಂಡೆ.. ಅದು ತಪ್ಪಾ ಸಾರ್?”

ತಾನು ಅವರಿಬ್ಬರು ಆಡುತ್ತಿರುವ ಆಟದ ದಾಳವಾಗಿ ಅವರಿಬ್ಬರೂ ತನ್ನೆದುರು ಇರುವ ಆಯ್ಕೆ, ತನ್ನ ನಿರ್ಧಾರದಿಂದ ಅವರಿಬ್ಬರ ಗೆಲುವು ಸೋಲುಗಳು ನಿಷ್ಕರ್ಷೆಯಾಗುತ್ತವೆ ಎಂಬ ಭ್ರಮೆಗೆ ಬೀಳುತ್ತಾಳೆ ಗೀತಾ. ಆದರೆ ಯಾವುದೂ ಅವಳ ಕೈಲಿ ಇಲ್ಲ ಎನ್ನುವುದನ್ನು ಚಿತ್ರದ ಎರಡನೆಯ ಭಾಗ ನಿರ್ದಯವಾಗಿ ನಿರೂಪಿಸುತ್ತಾ ಹೋಗುತ್ತದೆ. ಆಕೆ ಆಯ್ದುಕೊಂಡು ಹೋದ ನರೇಂದ್ರ ಆಕ್ಸಿಡೆಂಟಿನಲ್ಲಿ ಸತ್ತು ಹೋಗುತ್ತಾನೆ. ತಾನು ತಿರಸ್ಕರಿಸಿದ ಆಯ್ಕೆಯಾದ ಕೃಷ್ಣ ಆಕೆ ಕೆನ್ನೆಗೆ ಬಾರಿಸಿ ಓಡಿಸಿದರೂ ಮತ್ತೆ ಮತ್ತೆ ಬಂದು ಅಂಟಿಕೊಳ್ಳುತ್ತಾನೆ. ಯಾವುದೂ ಆಕೆಯ ಕೈಲಿಲ್ಲ ಎನ್ನುವ ಸತ್ಯವನ್ನು ಚಿತ್ರ ಸ್ಪಷ್ಟವಾಗಿ ಹೇಳುತ್ತದೆ. ಗೀತಾ ತಾನು ಸ್ವತಂತ್ರ ಆಯ್ಕೆಯನ್ನು ಹೊಂದಿದ್ದೇಬೆ ಎನ್ನುವ ಭ್ರಮೆಯಿಂದ ಹೊರ ಬರುವುದಕ್ಕೆ ಇದ್ದದ್ದು ಎರಡೇ ದಾರಿ.

ಒಂದು, ಸತ್ತು ಹೋಗುವುದು. ಆ ಮಾರ್ಗವನ್ನು ತಿರಸ್ಕರಿಸಿ ಬದುಕುಳಿದರೆ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡು ಹುಚ್ಚಿಯಾಗುವುದು. ಅಂದರೆ ಗೀತಾ ತನಗಿಂತ ಮೇಲ್ವರ್ಗದ ಸಮಾಜದ ಕೈಲಿ ಆಟದ ದಾಳವಾಗಿದ್ದೇನೆ ಎಂದು ಅರಿಯುವುದಕ್ಕೆ ಸಾಧ್ಯವೇ ಇಲ್ಲ. ಒಂದು ವೇಳೆ ಆ ಅರಿವನ್ನು ಪಡೆದು ಅದರಿಂದ ಕಳಚಿಕೊಂಡು ತನ್ನತನವನ್ನು ಸ್ಥಾಪಿಸಿಕೊಳ್ಳಬೇಕೆಂದರೆ ಪ್ರಾಣ ಕಳೆದುಕೊಳ್ಳಬೇಕು, ಇಲ್ಲವೇ ಪ್ರಜ್ಞೆ ಕಳೆದುಕೊಳ್ಳಬೇಕು.

ಮನೋವೈದ್ಯನೊಂದಿಗೆ ಮಾತನಾಡಿ ಚಿಕಿತ್ಸೆ ಪಡೆಯಲು ನಿರಾಕರಿಸುವ, ಪ್ರೇಮದಾಸ ಕರೆದೊಯ್ಯುವ ದ್ವೀಪದಲ್ಲಿ ಪುಂಡರಿಗೆ ತನ್ನ ಮೈಯೊಪ್ಪಿಸಿಕೊಳ್ಳುವ ಗೀತಾ ಪ್ರಜ್ಞೆಯನ್ನು ಕಳೆದುಕೊಳ್ಳುವ ಪ್ರಯತ್ನವನ್ನೂ ಮಾಡುತ್ತಾಳೆ. ಆದರೆ ಕೃಷ್ಣ ಅವಳನ್ನು ಪ್ರಜ್ಞೆಗೆ ವಾಪಸ್ ಎಳೆದು ತರುತ್ತಲೇ ಇರುತ್ತಾನೆ. ಅನಂತರ ಆಕೆ ಪ್ರಾಣವನ್ನು ಕಳೆದುಕೊಳ್ಳುತ್ತಾಳೆ.

ಹಾಗಿದ್ದರೆ, ಹುಚ್ಚಿಯಾಗುವ ಇಲ್ಲವೇ ಸಾಯುವ ಮೂಲಕ ಗೀತಾ ತನ್ನನ್ನು ತಾನು ಕಂಡುಕೊಂಡಳು ಎನ್ನಬಹುದೆ? ತನ್ನನ್ನೇ ತಾನು ಕಳೆದುಕೊಂಡು ಯಾರದೂ ಆಟದ ದಾಳವಾಗುವುದರಿಂದ ಪಾರಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಳು ಎನ್ನಬಹುದೆ? ಒಬ್ಬರು ಗೆದ್ದು ಇನ್ನೊಬ್ಬರು ಸೋಲಬೇಕು ಎನ್ನುವ ನಿಯಮವಿರುವ ಆಟದಲ್ಲಿ ಇಬ್ಬರೂ ಗೆಲ್ಲುವಂತೆ ಒಳ ಒಪ್ಪಂದಗಳನ್ನು ಮಾಡಿಕೊಂಡರೆ ನಿಜಕ್ಕೂ ಸೋಲುವುದು ಯಾರು? ಕೃಷ್ಣ ಹಾಗೂ ನರೇಂದ್ರ ಬೆಟ್ ನಿಂದ, ಒಳ ಒಪ್ಪಂದದಿಂದ ಶುರು ಮಾಡಿದ ಗೀತಾಳ ಪ್ರೇಮ ಎನ್ನುವ ಆಟದಲ್ಲಿ ಅವರಿಬ್ಬರೂ ಗೆಲ್ಲುತ್ತಾರೆಂದರೆ ಸೋಲುವುದು ಗೀತಾಳೆ. ಗೀತಾ ಬದುಕಿದ್ದರೆ, ಪ್ರಜ್ಞೆ ಉಳಿಸಿಕೊಂಡು ಬಾಳಿದ್ದರೆ ಆಕೆ ಸೋಲುತ್ತಿದ್ದಳು ಕೃಷ್ಣ, ನರೇಂದ್ರ ಗೆಲ್ಲುತ್ತಿದ್ದರು. ಈಕೆ ಸೋತು, ದಾಳವಾಗಿಯೇ ಬಾಳಬೇಕಿತ್ತು.  ತನ್ನನ್ನು ತಾನು ಕೊಂದುಕೊಳ್ಳುವ ಮೂಲಕ ಆಕೆ ಕೃಷ್ಣ ನರೇಂದ್ರರನ್ನು ಸೋಲಿಸಿದಳು, ತಾನು ಗೆದ್ದಳು!

ಹೀಗೆ ತಾನು ಸೋತರೆ ಗೆದ್ದಂತೆ, ಗೆದ್ದರೆ  ಸತ್ತು ಸೋತಂತೆ ಎನ್ನುವ ವ್ಯಂಗ್ಯಮಯವಾದ ದ್ವಂದ್ವಕ್ಕೆ ಸಿಲುಕಿದ ಗೀತಾಳಿಗೆ,ಆ ಮೂಲಕ ಆಕೆ ಭಾಗವಾಗಿರುವ ಆದರೆ ಭಾಗವಾಗಿದ್ದೇನೆಂದು ಒಪ್ಪಿಕೊಳ್ಳಲು ನಿರಾಕರಿಸುವ ಕೆಳವರ್ಗಕ್ಕೆ ಮುಕ್ತಿ ಎಂದು? ಹಾಗೂ ಹೇಗೆ? ಎನ್ನುವ ಬಹು ಹರಿತವಾದ ಪ್ರಶ್ನೆಯನ್ನು ಒಂದು ಸಮಾಜವಾಗಿ ನಾವು ಕೇಳಿಕೊಳ್ಳುವುದಕ್ಕೆ ಕೃಷ್ಣನ ಲವ್ ಸ್ಟೋರಿ ಪ್ರೇರೇಪಿಸುತ್ತದೆ ಎನ್ನಬಹುದು.

***

ಕೆಳವರ್ಗದ ಭಾಗವಾಗಿ, ಆ ಬದುಕನ್ನು ಒಪ್ಪಿಕೊಂಡ- ಗೀತಾಳ ಜೊತೆ ಜೊತೆಗೇ ತೆರೆಯ ಮೇಲೆ ಕಾಣುವ ಆಕೆಯ ತಾಯಿ ಉಮಾಶ್ರೀ ಪಾತ್ರ ಕಂಡುಕೊಂಡ ಉತ್ತರದಿಂದೇನಾದರೂ ಗೀತಾಳಿಗೆ ಮುಕ್ತಿ ಸಾಧ್ಯವೇ?

ನರೇಂದ್ರನ ಹಿಂದೆ ಹೊರಟು ಕೆಳವರ್ಗದಿಂದ ಶ್ರೀಮಂತ ವರ್ಗಕ್ಕೆ ಮಗಳೊಬ್ಬಳೆ ಹಾರಿಕೊಂಡು ಬಿಡುವುದನ್ನು ಸಹಿಸದ ಉಮಾಶ್ರೀ ಕೃಷ್ಣ ಬೊಟಿಕ್ ಶಾಪ್ ಇಡುವುದು, ಕಾರು ಕೊಂಡುಕೊಳ್ಳುವುದು, ತನ್ನ ಬೇಜವಾಬ್ದಾರಿಯ ಮಗನು ಜವಾಬ್ದಾರಿ ಅರಿತು ದುಡಿಮೆಗೆ ತೊಡಗುವುದು, ಮಧ್ಯಮ ವರ್ಗದಿಂದ ಮೇಲ್ ಮಧ್ಯಮ ವರ್ಗಕ್ಕೆ ಏರುತ್ತಿರುವ ಕೃಷ್ಣನ ತಂದೆ ತಾಯಿಯರನ್ನು ನಂಟರನ್ನಾಗಿಸಿಕೊಂಡು ತಾನು ಮಧ್ಯಮ ವರ್ಗಕ್ಕೆ ಏರುವುದು – ಇವುಗಳಲ್ಲಿ ಕಂಡುಕೊಳ್ಳುವ ಉತ್ತರದಿಂದ ಗೀತಾ ಗೆಲ್ಲಬಹುದಿತ್ತೇ?

Advertisement

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.