uniquesupri

Archive for 2009

ಒಡೆದು ಕಟ್ಟುವ ಕೆಲಸ

In ಒಡೆದು ಕಟ್ಟುವ ಕೆಲಸ on March 31, 2009 at 5:25 pm

ಧರ್ಮದ ಬಗೆಗೆ ಇರುವ ನನ್ನ ಕಂಪ್ಲೆಂಟ್ ಆದರೂ ಏನು? ಇದನ್ನು ಸ್ಪಷ್ಟ ಪಡಿಸಿಕೊಳ್ಳಬೇಕಿತ್ತು.  

ಧರ್ಮವನ್ನು ನಾನಿಷ್ಟು ಖಂಡಿಸುವುದಕ್ಕೆ ಕಾರಣ ಇದು ನನ್ನ ಕತ್ತಲೆಯಲ್ಲಿಟ್ಟಿದೆ ಎಂಬ ಆಕ್ರೋಶ. ಕೈಲಾಗದ ವಯಸ್ಸಿನಲ್ಲಿ ನಮ್ಮ ಮೇಲೆ ದಬ್ಬಾಳಿಕೆ ಮಾಡಿದ ವ್ಯಕ್ತಿಯನ್ನು ಬೆಳೆದ ಮೇಲೆ ನೆನಪಿಸಿಕೊಂಡಾಗ ಹುಟ್ಟುವ ಸಿಟ್ಟಿನಂಥದ್ದು ಅದು. ಹಾಡು ಹಗಲಲ್ಲೇ ಮೋಸ ಮಾಡಿದವನ ಮೇಲೆ ಹುಟ್ಟುವ ಅಸಹನೀಯ ತಿರಸ್ಕಾರದಂಥದ್ದು ಅದು. ಯಾರದೋ ಹೇರಿಕೆಯನ್ನು ಕಿತ್ತೆಸೆಯುವ ಉನ್ಮಾದದಲ್ಲಿ ಹುಟ್ಟಿದ ಅಸಹನೆಯ ಭಾವನೆಯದು. 

ಧರ್ಮ ನಿಂತಿರುವುದು ವಯ್ಯಕ್ತಿಕ ನಂಬಿಕೆಯ ಮೇಲೆ. ಆ ನಂಬಿಕೆಗೆ ಯಾವ ಸಾಕ್ಷಿ ಆಧಾರಗಳೂ ಬೇಕಿಲ್ಲ. ಅದೊಂದು ರೀತಿಯ ಭ್ರಾಂತು. ಅದು ಎಷ್ಟು ಬಾಲಿಶವಾದ ನಂಬಿಕೆಯೆಂದರೆ, ಒಂದೇ ಒಂದು ತರ್ಕದಿಂದ ಅದರ ಬುಡವನ್ನೇ ಅಲ್ಲಾಡಿಸಿಬಿಡಬಹುದು. ಆದರೂ ಅದು ಉಳಿದುಕೊಳ್ಳುತ್ತದೆ. ನಂಬಿಕೆಯಾಗಿ ಉಳಿಯುತ್ತೆ. ಅದು ಸಾಕ್ಷಿಗಳನ್ನಾಗಲಿ, ಪುರಾವೆಗಳನ್ನಾಗಲಿ ಆಧರಿಸುವುದಿಲ್ಲವಾದ್ದರಿಂದ ಅದು ಕುರುಡಾದ ನಂಬಿಕೆಯೇ ಆಗಿರುತ್ತದೆ. ಆ ನಂಬಿಕೆಯಿಂದ ಒಳ್ಳೆಯದಾದರೂ, ಕೆಟ್ಟದಾದರೂ ನಂಬಿಕೆ ಕುರುಡೇ ಆಗಿರುತ್ತದೆ. ಇಂತಹ ಕುರುಡು ನಂಬಿಕೆ ಮನುಷ್ಯನ ಬುದ್ಧಿವಂತಿಕೆಯನ್ನು, ವಿವೇಚನಾ ಶಕ್ತಿಯನ್ನು ಮಂಕಾಗಿಸುತ್ತದೆ.

ಇಂತಹ ನಂಬಿಕೆಗೆ ಒಳಗಾದ ಮನುಷ್ಯನಿಗೆ ಅದೊಂದು ಸಮರ್ಥನೆಯ ಸರಕಾಗುತ್ತದೆ. ತನ್ನ ವಯ್ಯಕ್ತಿಕ ನಂಬಿಕೆಯ ವಿರುದ್ಧ ಸಾಕ್ಷಿಯನ್ನಾಗಲಿ, ಪುರಾವೆಯನ್ನಾಗಲಿ ಒದಗಿಸಲು ಸಾಧ್ಯವಿಲ್ಲದಿರುವುದರಿಂದ ಆತನಿಗೆ ತನ್ನ ನಂಬಿಕೆ ಸಾರ್ವಕಾಲಿಕ ಸತ್ಯ ಎನ್ನಿಸುತ್ತದೆ. ತಾನು ಕಂಡ ಸತ್ಯಕ್ಕೆ ಆತ ಪ್ರಾಣ ಕೊಡಲೂ ಸಿದ್ಧನಾಗುತ್ತಾನೆ, ತೆಗೆಯುವುದಕ್ಕೂ  ಸಿದ್ಧನಾಗುತ್ತಾನೆ. 
ಇಂತಹ ಕುರುಡು ಶ್ರದ್ಧೆಯಿಂದ ಮುಕ್ತರಾಗಿ ಸ್ವತಂತ್ರವಾಗಿ ಆಲೋಚಿಸುವಂತಾಗಬೇಕಾದ್ದು ಮನುಷ್ಯರು ತಮಗೆ ತಾವು ಕೊಟ್ಟುಕೊಳ್ಳುವ ಅತ್ಯುತ್ತಮ ಸ್ವಾತಂತ್ರ್ಯ.

ಈ ಪ್ರಕ್ರಿಯೆಯಲ್ಲಿ ಪ್ರಶ್ನಿಸುವಿಕೆಯನ್ನು ಸಂಗಾತಿಯನ್ನಾಗಿಸಿಕೊಂಡರೆ ಒಂದೊಂದೇ ಕುರುಡು ನಂಬಿಕೆಯಿಂದ ಹೊರ ಬರಲು ಸಾಧ್ಯವಾಗುತ್ತದೆ. ಪ್ರಜ್ಞಾಪೂರ್ವಕವಾಗಿ ವಿವೇಚನಾತ್ಮಕವಾಗಿ ಅವಲೋಕಿಸಿ ಅನಂತರ ನಂಬುವ ಅವಕಾಶ ಸಿಕ್ಕುತ್ತದೆ.

ಇದಕ್ಕೆ ಹಳೆಯ ನಂಬಿಕೆಗಳನ್ನು ಒಡೆಯುವ ಕೆಲಸ ಅತ್ಯವಶ್ಯಕ ಎಂದು ಭಾವಿಸಿದ್ದೇನೆ.

ಅದಕ್ಕೆ ಸಹಾಯವಾಗುವ ಪರಿಕರಗಳನ್ನು ಈ ಬ್ಲಾಗಿನಲ್ಲಿ ಹಂಚಿಕೊಂಡರೆ ಅನೇಕರಿಗೆ ಉಪಯುಕ್ತವಾಗಬಹುದು ಎಂದುಕೊಂಡಿರುವೆ. ಇದು ಯಾರ ಮನನೋಯಿಸುವುದಕ್ಕೂ ಅಲ್ಲ. ನಮ್ಮ ನಂಬಿಕೆಗಳನ್ನು ಪ್ರಶ್ನಿಸಿಕೊಂಡು, ಹೆಚ್ಚು ವಿಚಾರವಂತರಾಗುವ ಪ್ರಯತ್ನವಷ್ಟೇ. 

ಈ ಮಾಲಿಕೆಯಲ್ಲಿ ಮೊದಲ ವಿಡಿಯೋ ಇಲ್ಲಿದೆ:

 

ಈ ವಿಡಿಯೋದಲ್ಲಿ ನಾಸ್ತಿಕನೊಬ್ಬ ಸತ್ತು ದೇವರ ಬಳಿ ಹೋಗುತ್ತಾನೆ. ದೇವರೊಂದಿಗಿನ ಆತನ ಮುಖಾಮುಖಿ…

ಕಂಡಿದ್ದು ಕಾಣದ್ದು ೧

In ಕಂಡಿದ್ದು ಕಾಣದ್ದು on January 24, 2009 at 7:22 am

ನನಗಿಷ್ಟವಾದದ್ದು, ನಾನು ಕಂಡ ಸಂಗತಿಗಳು ಜೊತೆಗೆ ಕಾಣದವು. ನಿಮಗೆ ಕಾಣಿಸಬೇಕನ್ನಿಸಿದವು ಎಲ್ಲವನ್ನೂ ಇಲ್ಲಿ ಹಂಚಿಕೊಳ್ಳುವೆ.

>>ನಿರ್ಗಮಿಸಿದ ಅಮೇರಿಕಾದ ಅಧ್ಯಕ್ಷ ಜಾರ್ಜ್ ಬುಶ್‌ ಬಗ್ಗೆ ನಮ್ಮ ಅಭಿಪ್ರಾಯವನ್ನು ಪುನರ್ ವಿಮರ್ಶೆಗೆ ಒಡ್ಡಿಕೊಳ್ಳಲು ಇದು ಸುಸಮಯ. ಬಹುಶಃ ಈ ಲೇಖನ ಸಹಾಯ ಮಾಡಬಹುದು…ಪ್ರತಾಪ್ ಬರೆದಿರುವ ದೋಷವಿದ್ದದ್ದು ಅವರ ಇಂಗ್ಲೀಷಿನಲ್ಲಿ ಗುಂಡಿಗೆಯಲ್ಲಲ್ಲ!

ಏಕಮುಖವಾದ ಅಭಿಪ್ರಾಯಗಳಿಂದ ಕೂಡಿದ ಬರವಣಿಗೆ ಅವರ ಶೈಲಿಯೇ ಆದರೂ ಕೆಲವು ಸಲ ಎಲ್ಲರೂ ಆಲೋಚಿಸುವಂತೆ ಮಾಡುವ ಮಾಹಿತಿಯನ್ನು ನೀಡಿರುತ್ತಾರೆ. ಇಲ್ಲಿಯೂ ಬುಶ್‌ನ ನಿಲುಗಳ ಮೇಲೆ ಅಪಾರವಾದ ವಿಶ್ವಾಸವನ್ನು ಕಾಣಿಸಿದ್ದರೂ ಅಫಘಾನಿಸ್ತಾನ ಯುದ್ಧದ ಬಗೆಗಿನ ಮಾಹಿತಿ ಉಪಯುಕ್ತವೆನಿಸಿತು.

 

>> ಅಬ್ದುಲ್ ರಶೀದರ ಬರಹಗಳಲ್ಲಿನ ಅಲೆಮಾರಿತನವನ್ನು, ದೊಡ್ಡ ದೊಡ್ಡ ಸಂಗತಿಗಳನ್ನು ಉಡಾಫೆಯಲ್ಲಿ ಕಂಡು ಬದುಕಿನ ಸಣ್ಣ ಪುಟ್ಟ ಸಂಗತಿಗಳನ್ನು ತಮ್ಮದೇ ವಿಶಿಷ್ಟ ತೀವ್ರತೆಯಲ್ಲಿ ಅನುಭವಿಸಿ ಬರೆಯುವ ಶೈಲಿಗೆ ಇತ್ತೀಚಿನ ಉದಾಹರಣೆ ಇದು: ಸ್ಟೋನ್ ಹಿಲ್ ಡೈರಿ : ಆಡು ಬಾಷಾ, ಒಬಾಮಾ ಮತ್ತು ಅಡಗೂಲಜ್ಜಿ ಕಥೆಗಳು

 

>> ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಹಮಾಸ್ ಹಾಗೂ ಇಸ್ರೇಲ್ ನಡುವಿನ ತಿಕ್ಕಾಟದ ಬಗ್ಗೆ ನಮಗೆ ಪತ್ರಿಕೆಗಳಲ್ಲಿ ಅಷ್ಟಾಗಿ ಮಾಹಿತಿ ದೊರೆಯುತ್ತಿಲ್ಲ. ಉದವಾಣಿಯಲ್ಲಿ ನಿರಂಜನ ವಾನಳ್ಳಿಯವರ ಅಂಕಣ ಬರಹ ಒಂದು ಕಾಣಿಸಿತು. – ಗಾಜಾ- ಮಕ್ಕಳು, ಮಹಿಳೆಯರ ಜೀವ ಎಣ್ಣೆಗಿಂತಲೂ ಅಗ್ಗವಾದ ತಾಜಾ ದುರಂತ