uniquesupri

Archive for October 2008

ತೂರಿದ ಕಲ್ಲಿನದ್ಯಾವ ಧರ್ಮ?

In ಪ್ರಸ್ತುತ on October 22, 2008 at 6:07 pm

ಇವತ್ತಿನ ಪರಿಸ್ಥಿತಿಯಲ್ಲಿ ಕೋಮುವಾದ, ಮತೀಯವಾದ, ಭಯೋತ್ಪಾದನೆಯ ಬಗ್ಗೆ ಮಾತಾಡುವುದು ಅಷ್ಟು ಸುಲಭವಲ್ಲ. ಯಾವ ಸಂದರ್ಭದಲ್ಲಿ, ಯಾರ ಎದುರು ನಾವು ಮಾತಾಡುತ್ತೇವೆ ಎಂಬುದರಿಂದ ಹಿಡಿದು ಯಾವ ಸ್ಥಾನದಿಂದ ನಾವು ಮಾತಾಡುತ್ತೇವೆ ಎಂಬುದೂ ಮುಖ್ಯವಾಗುತ್ತದೆ. ಇಬ್ಬರು ಹಿಂದೂಗಳು ಮಾತಾಡುವಾಗ ಭಯೋತ್ಪಾದನೆ ಹಾಗೂ ಇಸ್ಲಾಮಿನ ನಂಟಿನ ಬಗ್ಗೆ ಉಡಾಫೆಯಿಂದ ಮಾತಾಡಿಬಿಡಬಹುದು. ಆದರೆ ಅದೇ ಗೆಳೆಯರ ಗುಂಪಿನ ಮುಸ್ಲೀಂ ಯುವಕನೊಬ್ಬ ಬಂದ ತಕ್ಷಣ ಮಾತಿನ ವರಸೆ ಬದಲಾಯಿಸಿಬಿಡಬೇಕಾಗುತ್ತದೆ. ಪತ್ರಿಕೆಯ ಸಂಪಾದಕನಾದವನು, ಧಾರ್ಮಿಕ ಮುಖಂಡನಾದವನು, ಸಾಹಿತಿಯಾದವನು, ರಾಜಕಾರಣಿಯಾದವನು ತನ್ನ ಮಾತಿನ ಮೇಲೆ, ಅದು ಧ್ವನಿಸುವ ಅರ್ಥದ ಮೇಲೆ ಸದಾ ಗಮನವಿಟ್ಟುಕೊಂಡಿರಬೇಕಾಗುತ್ತದೆ. ಎಡ ಅಥವಾ ಬಲ ಪಂಥೀಯತೆಯ ಹಣೆ ಪಟ್ಟಿ ಹತ್ತಿಸಿಕೊಳ್ಳದೆ ಏನನ್ನೂ ಮಾತಾಡಲು ಸಾಧ್ಯವೇ ಆಗದು. ಏನು ಮಾತಾಡಿದರೂ ಲೇಬಲಿಂಗ್ ನಡೆದೇ ನಡೆಯುತ್ತದೆ. ಹಾಗಂತ ಮಾತಾಡದೆ ಸುಮ್ಮನೆ ಉಳಿಯುವುದು ಪ್ರಜ್ಞಾವಂತರ ಲಕ್ಷಣವಲ್ಲ. ಮಾತಾಡಿಯೇ ಆಡುತ್ತೇವೆ. ಅದರಿಂದ ಅಂಟಿಕೊಳ್ಳುವ ಹಣೆಪಟ್ಟಿಯನ್ನು ಉಳಿಸಿಕೊಳ್ಳಲು ಇಲ್ಲವೇ ಅದರಿಂದ ಪಾರಾಗಲೂ ಮತ್ತೆ ಏನನ್ನಾದರೂ ಮಾತಾಡುತ್ತೇವೆ. ಹೊಸ ಹಣೆಪಟ್ಟಿಯನ್ನು ಅಂಟಿಸಿಕೊಳ್ಳುತ್ತೇವೆ. ಹಣೆಪಟ್ಟಿಗಳ ಚಕ್ರವ್ಯೂಹದಲ್ಲಿ ಕಳೇದುಹೋಗಿಬಿಡುತ್ತೇವೆ. ಹೀಗಾಗಿಯೇ ಹೊಸ ಚಿಂತನೆಯು ಹುಟ್ಟುವುದಿಲ್ಲ. ಅಪ್ಪಟ ಪ್ರಾಮಾಣಿಕವಾದ, ಮಾನವೀಯತೆಯ ನಿಲುವುಗಳು ಹೊರಬರುವುದಿಲ್ಲ. ಯಾವ ಸಮಸ್ಯೆಗೂ ಪರಿಹಾರಗಳು ಹೊಳೆಯುವುದಿಲ್ಲ. ಚರ್ಚೆಗಳು ನಮ್ಮನ್ನು ಬೆಳೆಸದೆ, ನಮ್ಮನ್ನು ಒಂದುಗೂಡಿಸದೆ ಹೋಗುತ್ತವೆ.

ಇತ್ತೀಚಿನ ಎರಡು ವಿದ್ಯಮಾನಗಳನ್ನೇ ಗಮನಿಸಿ. ದೇಶದಾದ್ಯಂತ ಅಸಂಖ್ಯಾತ ಬಾಂಬ್ ಸ್ಪೋಟಗಳು ನಡೆಯುತ್ತಿವೆ. ಇವ್ಯಾವೂ ಆಕಸ್ಮಿಕಗಳಲ್ಲ. ಇಂತಹ ಕೃತ್ಯ ನಡೆಸುವುದಕ್ಕೆ ದೊಡ್ಡ ಮಟ್ಟದ ಸಂಘಟನೆ ಹಾಗೂ ಯೋಜನೆ ಬೇಕು. ಆ ಸಂಘಟನೆಗೆ ಒಂದು ಐಡಿಯಾಲಜಿ ಅದನ್ನು ಆರ್ಥಿಕವಾಗಿ, ಭಾವುಕವಾಗಿ ಬೆಂಬಲಿಸುವ ವರ್ಗ ಬೇಕೇ ಬೇಕು. ಅದ್ಯಾವುದೂ ಇಲ್ಲದೆ ಇಷ್ಟು ವ್ಯಾಪಕವಾಗಿ ಬಾಂಬ್ ಸ್ಪೋಟಗಳು ನಡೆಯಲು, ಮುಗ್ಧರ ಜೀವ ಹೋಗಲು ಸಾಧ್ಯವೇ ಇಲ್ಲ. ಆದರೆ ಭಯೋತ್ಪಾದನೆಯ ಬಗ್ಗೆ ಮಾತನಾಡುವಾಗ ನಮಗೆ ಎದುರಾಗುವ ಪರಿಸ್ಥಿತಿಯಾದರೂ ಎಂಥದ್ದು? ರಾಜಕಾರಣಿಗಳನ್ನು ಬಿಟ್ಟು ಬಿಡಿ, ಇಂದು ಬಿಜೆಪಿಯಲ್ಲಿರುವ ವ್ಯಕ್ತಿ ಭಯೋತ್ಪಾದನೆಗೆ ಮುಸ್ಲೀಂ ಮೂಲಭೂತವಾದವೇ ಕಾರಣ ಎಂದು ಹೇಳಿದರೆ ಮರುದಿನ ಕಾಂಗ್ರೆಸ್ಸಿಗೆ ಹಾರಿ ಇದು ಅಲ್ಪಸಂಖ್ಯಾತರ ವಿರುದ್ಧ ಬಹುಸಂಖ್ಯಾತರಲ್ಲಿ ಕಹಿಯನ್ನು ಬಿತ್ತಲು ಪಟ್ಟ ಭದ್ರ ಹಿತಾಸಕ್ತಿಗಳು ನಡೆಸುತ್ತಿರುವ ಕೃತ್ಯ ಎಂದು ಮಾತನಾಡುತ್ತಾನೆ. ಅಸಲಿಗೆ ರಾಜಕಾರಣಿಗೆ ಭಯೋತ್ಪಾದನೆಯ ಬಗ್ಗೆ ಮಾತಾಡಲಿಕ್ಕೆ ಅರ್ಹತೆ ಏನಿದೆ? ಭಯೋತ್ಪಾದನೆಯನ್ನು ಭದ್ರತೆಯ ಸಮಸ್ಯೆಯಾಗಿ ಪರಿಶೀಲಿಸಲು ಆತನೇನು ಪೊಲೀಸ್ ಅಧಿಕಾರಿಯಲ್ಲ. ಅದನ್ನೊಂದು ವೈಚಾರಿಕ ಭಿನ್ನಮತೀಯತೆಯಾಗಿಯೋ, ಚಳುವಳಿಯ ಇಲ್ಲವೇ ಪ್ರತಿಕ್ರಿಯೆಯ ಪ್ರಕ್ರಿಯೆಯಾಗಿ ಪರಿಶೀಲಿಸಿ ಮಾತಾಡಲು ಆತ ಸಮಾಜ ವಿಜ್ಞಾನಿಯೂ ಅಲ್ಲ. ಆತ ಕೇವಲ ತನ್ನ ಹಿತಾಸಕ್ತಿಗೆ ಪೂರಕವಾಗುವ ನೆಲೆಯಿಂದ ಮಾತಾಡಬಲ್ಲ. ಆದರೆ ನಮ್ಮ ಮಾಧ್ಯಮಗಳ ಬಹುಪಾಲು ಸ್ಪೇಸ್‌ನ್ನು ಆಕ್ರಮಿಸಿಕೊಳ್ಳುವವರು ಇವರೇ. ನಮಗೆ ಗುಪ್ತಚರ ಇಲಾಖೆಯ ಅಧಿಕಾರಿಯ ಅಭಿಪ್ರಾಯಗಳು ತಿಳಿಯುವುದಿಲ್ಲ, ಸಮಾಜ ತಜ್ಞರ ತರ್ಕದ ಬಗ್ಗೆ ಯಾವ ಪತ್ರಿಕೆಗಳೂ ತಿಳಿಸುವುದಿಲ್ಲ. ಹೀಗಾಗಿ ಭಯೋತ್ಪಾದನೆಯಾಗಲೀ, ಚರ್ಚ್ ಮೇಲಿನ ದಾಳಿಯನ್ನಾಗಲೀ ಕೇವಲ ಲಾ ಅಂಡ್ ಆರ್ಡರ್ ಸಮಸ್ಯೆಯೆಂದು ಪರಿಗಣಿಸಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಪೊಲೀಸರಿಗೆ ತಮ್ಮ ಕೆಲಸವನ್ನು ತಾವು ಮಾಡಲು ಬಿಡದೆ ಎಲ್ಲರೂ ಮಾತಾಡಲು ಶುರುಮಾಡುತ್ತೇವೆ. ರಾಜಕಾರಣಿಗಳು ಒಂದು ರೀತಿಯಲ್ಲಿ ಚರ್ಚೆಯನ್ನು ಕ್ಲಿಷ್ಟಗೊಳಿಸಿದರೆ, ನಮ್ಮ ಸಂಸ್ಕೃತಿ ಚಿಂತಕರು, ಸಾಹಿತಿಗಳು ರಂಗ ಪ್ರವೇಶ ಮಾಡಿ ಮತ್ತಷ್ಟು ಗೊಂದಲ ಹುಟ್ಟಿಸುತ್ತಾರೆ.

ಬಾಂಬ್ ಸ್ಪೋಟವನ್ನು ಒಂದು ದೇಶದ ಭದ್ರತೆಯ ಸಮಸ್ಯೆಯಾಗಿ ಪರಿಗಣಿಸಿದರೆ ಸಮಸ್ಯೆ ಎಷ್ಟೋ ಪರಿಹಾರವಾದಂತಾಗಿಬಿಡುತ್ತದೆಯಲ್ಲವೇ? ಬಾಂಬ್ ಸ್ಪೂಟವನ್ನು ಒಂದು ಕೋಮಿನೊಂದಿಗೆ ಗುರುತಿಸಿದಾಗ, ಪೊಲೀಸರ ಕಗ್ಗೊಲೆಯನ್ನು, ಭೂ ಮಾಲೀಕರ ಕೊಲೆಯನ್ನು ಒಂದು ಐಡಿಯಾಲಜಿಯೊಂದಿಗೆ ಗುರುತಿಸಿದಾಗ ಅನವಶ್ಯಕವಾದ ಗೊಂದಲ ಹುಟ್ಟಿಕೊಳ್ಳುತ್ತದೆ. ಭಯೋತ್ಪಾದನೆಯ ನಿಯಂತ್ರಣದ ಕೆಲಸವನ್ನು ಪೊಲೀಸರಿಗೆ ಒಪ್ಪಿಸಿ ಆ ಇಲಾಖೆ ತನ್ನ ಗರಿಷ್ಠ ಸಾಮರ್ಥ್ಯವನ್ನು ಬಳಸಿ ಅದನ್ನು ಮಾಡಲು ಬಿಟ್ಟು ರಾಜಕಾರಣಿಗಳು ತಣ್ಣಗೆ ಏಕಿರಬಾರದು? ನಮ್ಮ ಸಂಸ್ಕೃತಿ ಚಿಂತಕರು ಸಾಹಿತಿಗಳು ಚರ್ಚ್ ಮೇಲೆ ನಡೆದ ದಾಳಿ, ಮಕ್ಕಳು- ಮರಿಯನ್ನದೆ ಅಮಾಯಕರ ಜೀವ ತೆಗೆದು, ನನ್‌ಗಳ ಮಾನಹರಣ ಮಾಡಿ ಬೆತ್ತಲಾಗಿ ಪರೇಡ್ ನಡೆಸಿದ್ದನ್ನೆಲ್ಲಾ ಲಾ ಅಂಡ್ ಆರ್ಡರ್ ಸಮಸ್ಯೆ ಎಂದು ಬಗೆದು ಅದನ್ನು ಬದಿಗಿಟ್ಟು ಮತಾಂತರದ ಕೆಡುಕು ಹಾಗೂ ಕ್ರಿಶ್ಚಿಯಾನಿಟಿಯ ಆಕ್ರಮಣಕಾರಿ ಸ್ವಭಾವದ ಬಗ್ಗೆ ಚರ್ಚೆ ನಡೆಸಲು ಏನು ಧಾಡಿ? ಒಂದು ಐಡಿಯಾಲಜಿ ಎಷ್ಟೇ ಉದಾತ್ತವಾಗಿರಬಹುದು ಹಾಗಂತ ಅದರಿಂದುಂಟಾಗುವ ಹಿಂಸೆ, ಪ್ರಾಣನಾಶ, ಆಸ್ಥಿ ನಾಶವನ್ನೆಲ್ಲಾ ಸಮರ್ಥಿಸಿಕೊಳ್ಳುವುದು ತಪ್ಪು. ಪೊಲೀಸರು ಅಮಾಯಕ ಮುಸಲ್ಮಾನರನ್ನು ಬಂಧಿಸಿ ಹಿಂಸಿಸುತ್ತಿದ್ದಾರೆ ಎಂದು ಆರೋಪಿಸುವ ಮಾನವ ಹಕ್ಕು ರಕ್ಷಣೆಯ ಯೋಧರಿಗೂ, ಕ್ರೈಸ್ತರ ಮೇಲಿನ ದಾಳಿಗೆ ಹಿಂದೂ ದೇವತೆಗಳ, ಹಿಂದೂ ಧರ್ಮದ ಅವಹೇಳನದಿಂದ ಹುಟ್ಟಿದ ಆವೇಶವೇ ಕಾರಣ ಎನ್ನುವ ಹಿಂದೂ ಧರ್ಮ ರಕ್ಷಣೆಯ ಸೈನಿಕರಿಗೂ ಇದು ಅರ್ಥವಾಗಬೇಕು. ಬಜರಂಗ ದಳದ ಕಾರ್ಯಕರ್ತನಿಗಾಗಲೀ, ಸಿಮಿಯ ಸದಸ್ಯನಿಗಾಗಲಿ ತನ್ನ ತತ್ವ ಪ್ರತಿಪಾದಿಸಲು ತಾನು ನಂಬಿದ್ದು ಶ್ರೇಷ್ಠ ಎಂದು ವಾದಿಸಲು ಹಕ್ಕು ಇದೆಯಾದರೂ ಪ್ರಾಣ ಹಾನಿ, ಗದ್ದಲ ಮಾಡಿದರೆ ಅದನ್ನು ಒಂದು ಭದ್ರತೆಯ ಸವಾಲಿನ ಹಾಗೆ ಕಾಣಬೇಕು. ಕಲ್ಲು ತೂರಿದವ ಯಾರು ಎಂದು ನೋಡಿ ಲಾಠಿ ಬೀಸುವ ಅನಿವಾರ್ಯತೆ ಪೊಲೀಸರಿಗಿರಬಾರದು. ಏಕೆಂದರೆ ತೂರಿದ ಕಲ್ಲಿಗೆ ಯಾವ ಪಂಥೀಯತೆಯೂ, ಯಾವ ವೈಚಾರಿಕತೆಯೂ, ಯಾವ ಧಾರ್ಮಿಕತೆಯೂ ಇರದು.  ಅದನ್ನು ಎದುರಿಸುವ ಪೊಲೀಸರ ಬ್ಯಾರಿಕೇಡಿಗೂ ಅದಿರಬಾರದು.

ಏನಂತೀರಿ?